ಪಟ್ಟಣವು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ನಮ್ಮಲ್ಲಿ ಎಲ್ಲ ಧರ್ಮದವರು ಸೌಹಾರ್ದತೆಯೊಂದಿಗೆ ಉರೂಸ್ ಹಾಗೂ ಜಾತ್ರೆ ಸೇರಿಕೊಂಡು ಆಚರಿಸುತ್ತಾ ಕೂಡಿ ಬಾಳುತ್ತಿರುವುದು ಸಂತಸ ತಂದಿದೆ.
ಗಜೇಂದ್ರಗಡ: ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶವಾಗಿದೆ. ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆಯನ್ನು ಮೂಡಿಸಲು ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಕೊಟಗಿ ತಿಳಿಸಿದರು.
ಪಟ್ಟಣದ ಜಾಮಿಯಾ ಮಸೀದಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಅಮರಪ್ಪ ಕೊಟಗಿ ಪರಿವಾರದಿಂದ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.ಪಟ್ಟಣವು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ನಮ್ಮಲ್ಲಿ ಎಲ್ಲ ಧರ್ಮದವರು ಸೌಹಾರ್ದತೆಯೊಂದಿಗೆ ಉರೂಸ್ ಹಾಗೂ ಜಾತ್ರೆ ಸೇರಿಕೊಂಡು ಆಚರಿಸುತ್ತಾ ಕೂಡಿ ಬಾಳುತ್ತಿರುವುದು ಸಂತಸ ತಂದಿದೆ. ಒಬ್ಬ ವ್ಯಕ್ತಿಯನ್ನು ಅರಿಯಬೇಕೆಂದರೆ ಆ ವ್ಯಕ್ತಿಯ ಜತೆ ಬೆರೆತಾಗ ಮಾತ್ರ ಆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ವ್ಯಕ್ತಿಯನ್ನು ಅರ್ಥ ಮಾಡಿಕೊಂಡರೆ ಸಮಾಜವನ್ನು ಅರ್ಥ ಮಾಡಿಕೊಂಡಂತೆ. ಸಮಾಜದಲ್ಲಿರುವ ಇತರ ಧರ್ಮಿಯರನ್ನು ಸೋದರತ್ವದಿಂದ ಕಾಣುವುದು ಮುಖ್ಯವಾಗಿದೆ ಎಂದ ಅವರು, ಪುರಾಣ ಪ್ರವಚನ ವೇಳೆ ಮುಸ್ಲಿಮರು ಅನ್ನದಾಸೋಹ ಮಾಡಿಸುವ ಮೂಲಕ ನಮ್ಮೊಂದಿಗೆ ಕೈಜೋಡಿಸುತ್ತಾರೆ. ರಂಜಾನ್ ಹಬ್ಬದಲ್ಲಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಿ ನಾವೆಲ್ಲರೂ ಪರಸ್ಪರ ಗೌರವದಿಂದ ಭಾವೈಕ್ಯತೆಯಿಂದ ಬಾಳುತ್ತಿದ್ದೇವೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಫಯಾಜ್ ತೋಟದ ಮಾತನಾಡಿ, ಸ್ಥಿತಿವಂತರು ದಾನ ಮಾಡುವುದು ಸಂಪ್ರದಾಯ. ಉಪವಾಸ ಮಾಡಿದರೆ ದೇಹದ ಆರೋಗ್ಯ ಉತ್ತಮವಾಗಿರುವುದು. ಪ್ರಾರ್ಥನೆಯಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಧಾರ್ಮಿಕ ಆಚರಣೆ ನೆಪದಲ್ಲಿ ಸೌಹಾರ್ದ ಇಪ್ತಿಯಾರ ಕೂಟ ಹಮ್ಮಿಕೊಳ್ಳುವ ಮೂಲಕ ಪರಸ್ಪರಲ್ಲಿ ಪ್ರೀತಿ, ವಿಶ್ವಾಸ ಗಟ್ಟಿಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದರು. ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ ತಟಗಾರ, ಮಾಜಿ ಚೇರ್ಮನ್ ಎ.ಡಿ. ಕೋಲಕಾರ, ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿದರು. ವಕೀಲ ಫಯಾಜ್ ತೋಟದ, ಅಲ್ಲಮಪ್ರಭು ಕೊಟಗಿ, ಮುಜಬುರ ಮುಧೋಳ, ನೀಲಕಂಠ ಸವಣೂರ, ಯುಸೂಫ ಅತ್ತಾರ, ಮೈಬುಸಾಬ ಚಿನ್ನೂರ, ಅನ್ವರಬಸು ಮಾರನಬಸರಿ, ಎ.ಜಿ. ತಾಳಿಕೋಟಿ ಎಂ.ಎಚ್. ಕೋಲಕಾರ, ಮಾಸುಮಲಿ ಮದಗಾರ ಸೇರಿ ಉಪವಾಸ ನಿರತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.