ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಬರುವ ಮೇ 7ಕ್ಕೆ ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು, ಕಡ್ಡಾಯವಾಗಿ ಬಂದು ಮತ ಹಾಕುವಂತೆ ಗುಳೆ ಹೋದ ಪಾಲಕರಿಗೆ ಮಕ್ಕಳು ಭಾವನಾತ್ಮಕವಾಗಿ ಪತ್ರ ಬರೆದು ಮನವಿ ಮಾಡುವ ವಿನೂತನ ಅಭಿಯಾನ ಜಿಲ್ಲೆಯಲ್ಲಿ ಸಾಗಿದೆ.
ಹೊಟ್ಟೆಪಾಡಿಗಾಗಿ ದುಡಿಯಲು ಹೋದ ಪಾಲಕರಿಗೆ ಮತದಾನ ದಿನದಂದು ಊರಿಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ನನ್ನ ಮತ ನನ್ನ ಹಕ್ಕು, ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ನುಡಿಗಳನ್ನು ಮಕ್ಕಳು ಪತ್ರದಲ್ಲಿ ಸೇರಿಸಿ ಭಾವನಾತ್ಮಕವಾಗಿ ಪತ್ರ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕುತ್ತಿದ್ದು, ಇದು ತಮ್ಮ ಮಕ್ಕಳ ಪ್ರೀತಿ ನೆನಪಿಸುವುದರೊಂದಿಗೆ, ಮತದಾನ ಜವಾಬ್ದಾರಿ ಗಂಟೆಯನ್ನು ಬಾರಿಸುವಂತೆ ಮಾಡಿದೆ.ಪ್ರತಿ ವರ್ಷ ರಾಯಚೂರು ನಗರ, ಗ್ರಾಮೀಣ, ಮಾನ್ವಿ, ದೇವದುರ್ಗ, ಲಿಂಗಸುಗೂರು, ಮಸ್ಕಿ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ದೂರದ ಬೆಂಗಳೂರು, ಪುಣೆ, ಮಹಾರಾಷ್ಟ್ರಕ್ಕೆ ದುಡಿಯಲು ಗುಳೆ ಹೋಗುತ್ತಾರೆ. ಇದು ಪ್ರತಿ ವರ್ಷ ನಡೆಯುವ ನಿರಂತರ ಪ್ರಕ್ರಿಯೆ. ಬಡತನ, ನಿರುದ್ಯೋಗ, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಂಕಷ್ಟ ಹೀಗೆ ಹತ್ತಾರು ಕಾರಣ ಇದರ ಹಿಂದಿವೆ. ಕೃಷ್ಣಾ ಮತ್ತು ತುಂಗಭದ್ರಾ ನದಿ, ಎನ್‌ಆರ್‌ಬಿಸಿ, ಟಿಎಲ್‌ಬಿಸಿ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶಗಳಿದ್ದರೂ ಸಹ ವಿವಿಧ ಕಾರಣಗಳಿಂದಾಗಿ ಗುಳೆ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಸಲ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಕೆಲಸ ಅರಸಿ ಹೆತ್ತವರು, ಮಕ್ಕಳನ್ನು ತಮ್ಮ ಸ್ವಂತ ಊರುಗಳಲ್ಲಿಯೇ ಬಿಟ್ಟು ದುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ದೂರದ ಊರುಗಳಿಗೆ ಹೋಗಿದ್ದಾರೆ. ಇದರಿಂದಾಗಿ ಮತದಾನದ ಪ್ರಮಾಣದ ಮೇಲೂ ಪರಿಣಾಮ ಬೀಳುತ್ತಿದೆ.
ಭಾವನಾತ್ಮಕ ಅಂಶ : ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿಗಳು ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿವೆ. ಆದರೆ ಇದೀಗ ಭಾವನಾತ್ಮಕ ಅಂಶದಡಿ ದೂರದ ಊರುಗಳಿಗೆ ಹೋಗಿರುವ ತಂದೆ-ತಾಯಿಗೆ ಮಕ್ಕಳ ಕೈಯಿಂದ ಮತದಾನ ಮಾಡುವಂತೆ ಅಂಚೆ ಪತ್ರ ಬರೆಸಿ ಅವರಿರುವ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತಿದೆ. ಜಿಲ್ಲೆ ಮಸ್ಕಿ ಸೇರಿ ವಿವಿಧ ತಾಲೂಕುಗಳ ಗ್ರಾಪಂ ವ್ಯಾಪ್ತಿಯಲ್ಲಿ ಅಲ್ಲಿಯ ಪಿಡಿಒ, ಕಂದಾಯ ಇತರೆ ಇಲಾಖೆಯ ಅಧಿಕಾರಿಗಳು ಊರಿನ ಶಾಲೆಗಳಿಗೆ ಹೋಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಗುಳೆ ಹೋಗಿರುವ ಹಾಗೂ ದೂರದ ಊರಿನಲ್ಲಿರುವ ಪಾಲಕರು,ಪೋಷಕರಿಗೆ ಅಂಚೆಪತ್ರಗಳನ್ನು ರವಾನಿಸುವ ಅಭಿಯಾನ ಕೈಗೊಂಡಿದ್ದಾರೆ. ಇದು ಮತದಾನದ ಹಕ್ಕನ್ನು ಗುರುತಿಸುವುದರ ಜೊತೆಗೆ ಮಕ್ಕಳ ಭಾವನಾತ್ಮಕ ಸಂಬಂಧ ಸಂಕೇತವಾಗಿಯೂ ಕೆಲಸ ಮಾಡುತ್ತಿದೆ ಎಂಬುದು ಅಧಿಕಾರಿಗಳ ಅಂಬೋಣ.ಲೋಕಸಭಾ ಚುನಾವಣೆಯ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅದರಡಿಯಲ್ಲಿಯೇ ಗುಳೆ ಹೋದವರಿಗೆ ಅವರ ಮಕ್ಕಳಿಂದ ಅಂಚೆ ಪತ್ರ ಬರೆಸಿ ಮತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ.
ಪಾಂಡ್ವೆ ರಾಹುಲ್ ತುಕಾರಾಮ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಸಿಇಒ ಜಿಪಂ, ರಾಯಚೂರು