ಸನ್ಮಾನ । 20 ವರ್ಷಗಳಿಂದ ದೇಶ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಸೈನಿಕ । ಹಾರ, ಪೇಟ ತೊಡಿಸಿ ಗೌರವ
ಕನ್ನಡಪ್ರಭ ವಾರ್ತೆ ಹಾಸನಕಳೆದ 20 ವರ್ಷಗಳಿಂದ ದೇಶದ ಗಡಿ ಕಾದು ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತವರಿಗೆ ಮರಳಿದ ಯೋಧನಿಗೆ ಹಾಸನ ನಗರದ ಡೈರಿ ವೃತ್ತದಲ್ಲಿ ಅದ್ಧೂರಿ ಸ್ವಾಗತ ನೀಡಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ, ಪೇಟ ತೊಡಿಸಿ ಬರಮಾಡಿಕೊಳ್ಳಲಾಯಿತು. ನಂತರ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.
ಯೋಧ ಟಿ.ಜಿ. ಜಗದೀಶ್ ಅರಸೀಕೆರೆ ರಸ್ತೆ ಬಿ. ಕಾಟೀಹಳ್ಳಿ ನಿವಾಸಿಯಾಗಿದ್ದು, ತಂದೆ ಗುಂಡೇಗೌಡ ಮತ್ತು ತಾಯಿ ಜಯಮ್ಮ ಇಬ್ಬರೂ ಸಾವನಪ್ಪಿದ್ದು, ಇವರ ಮೂವರು ಮಕ್ಕಳಲ್ಲಿ ಜಗದೀಶ್ ಒಬ್ಬರು. ಇವರ ಪತ್ನಿ ಸವಿತಾ ಹಾಗೂ ಇವರಿಗೆ ಇಬ್ಬರೂ ಮಕ್ಕಳಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಹಾಗೂ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದು ದೇಶ ಸೇವೆ ಮಾಡಿದ ಸೈನಿಕರ ಜೊತೆ ಕುಟುಂಬ ಸದಸ್ಯರಿಗೂ ಅಭಿನಂದನೆ ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿಸಲಾಯಿತು.ನಂತರ ಮಾಧ್ಯಮದೊಂದಿಗೆ ಜಗದೀಶ್ ಮಾತನಾಡಿ, ‘2004 ರಲ್ಲಿ ಹಾಸನದಲ್ಲೆ ಆರ್ಮಿ ಸೆಲೆಕ್ಷನ್ ಆಗಿದ್ದು, 2005-06 ರಲ್ಲಿ ತರಬೇತಿ ಪಡೆದ ನಂತರ 2006 ರಲ್ಲಿ ಮೊದಲು ಜಮ್ಮುವಿಗೆ ಮೊದಲ ಕರ್ತವ್ಯಕ್ಕೆ ಹಾಜರಾಗಿದ್ದು, ನಂತರ ಅಸ್ಸಾಂ, ದೆಹಲಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಲಡಾಖ್, ಲೆಸೇರಾ ನಂತರ ಜೋತುಪುರಿಯಲ್ಲಿ ಸೇವೆ ಸಲ್ಲಿಸಿದೆ, ನಂತರದಲ್ಲಿ ಬೆಂಗಳೂರು ತರಬೇತಿಯಲ್ಲಿ ನನಗೆ 2 ವರ್ಷ ಸೇವೆ ಮಾಡಲು ಅವಕಾಶ ಸಿಕ್ಕಿತು’ ಎಂದು ಸೇವೆ ಮೆಲುಕು ಹಾಕಿದರು.
‘ಬಳಿಕ ಸಿಕ್ಕಿಂನ ಚೈನ ಬಾರ್ಡರ್‌ಗೆ ಹಾಕಿದರು. ಇಲ್ಲಿ ತುಂಬ ಕೋಲ್ಡ್ ಇತ್ತು. ಆದ್ರೂ ನಮ್ಮ ದೇಶದ ಸೇವೆಗಾಗಿ ಸಾಧ್ಯವಾದಷ್ಟು ಕೆಲಸ ಮಾಡಿದೆ. ಇಲ್ಲಿ ಮುಗಿಸಿಕೊಂಡು ಹಿಮಾಚಲ ಪ್ರದೇಶಕ್ಕೆ ಹೋಗಿದ್ದೆವು. ಇಲ್ಲಿ ಕೊನೆಯ ಎರಡು ವರ್ಷಗಳ ಕಾಲ ಸರ್ವಿಸ್ ಮುಗಿಸಿ ತವರು ಮನೆಗೆ ವಾಪಸ್ ಹಿಂದುರಿಗಿ ಬಂದಿರುವುದು ಬಹಳ ಸಂತೋಷವಾಗಿದೆ. ಕಳೆದ 20 ವರ್ಷಗಳ ಕಾಲ ಭಾರತ ಮಾತೆ ಸೇವೆ ಮಾಡಿದ್ದು, ಈಗ ಕನ್ನಡ ತಾಯಿ ಸೇವೆ ಮಾಡಲು ಅವಕಾಶ ಕೊಟ್ಟಿರುವುದು ನನಗೆ ಸಂತೋಷ ತಂದಿದೆ’ ಎಂದು ಹೇಳಿದರು.‘ನನ್ನ ಸೇವಾವಧಿಯಲ್ಲಿ ಮರೆಯಲಾಗದ ಘಟನೆ ಎಂದರೆ ಚೈನ ಬಾರ್ಡರ್‌ಗೆ ವಸ್ತುಗಳ ಸಾಗಿಸಬೇಕಾಗಿತ್ತು. ಈ ವೇಳೆ ಒಂದು ದಿವಸ ನಾವು ಮತ್ತು ನಮ್ಮ ಅಧಿಕಾರಿಗಳೆಲ್ಲಾ ಜೆಸಿಬಿ ಮೂಲಕ ನಿಂತುಕೊಂಡು ಐಸ್ ಕ್ಲಿಯೆರೆನ್ಸ್ ಮಾಡುತ್ತಿದ್ದೆವು, ಮೇಲಿಂದ ಒಂದೂವರೆ ಕಿಲೋ ಮಿಟರ್ ಐಸ್ ಕೆಳಗೆ ಕುಸಿದು ನಮ್ಮ ಅಧಿಕಾರಿಗಳು ಸಾವನ್ನಪ್ಪಿದರು. ಇದು ನಮಗೆ ಮರೆಯಲಾಗದ ಸಂಗತಿ’ ಎಂದು ಮೆಲುಕು ಹಾಕುತ್ತ ಕಣ್ಣೀರು ಹಾಕಿದರು.
ಮೆರೆವಣಿಗೆಯಲ್ಲಿ ಸೈನಿಕ ನಿವೃತ್ತ ಸಂಘದ ಅಧ್ಯಕ್ಷ ವೆಂಕಟೇಶ್, ಸಂಚಾಲಕ ರಮೇಶ್, ನಿರ್ದೇಶಕ ಎಸ್.ಕೆ. ಮಂಜೇಗೌಡ, ಚಂದ್ರಶೇಖರ, ಸಹ ಕಾರ್ಯದರ್ಶಿ ಚಂದ್ರೇಗೌಡ, ಉಪಾಧ್ಯಕ್ಷ ಗೋವಿಂದೇಗೌಡ, ಸೈನಿಕ ಜಗದೀಶ್ ಸಹೋದರರ ಮೋಹನ್ ಕುಮಾರ್, ಪಾಂಡುರಂಗ, ನಂದೀಶ್, ರವಿ, ಅಶೋಕ್, ಕುಮಾರ್, ರಾಜೇಗೌಡ ಇತರರಿದ್ದರು.ತವರಿಗೆ ಮರಳಿದ ಯೋಧನಿಗೆ ಹಾಸನ ನಗರದ ಡೈರಿ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.