ರಸ್ತೆಗಳ ದುರಸ್ತಿಗೆ ಹಾಸ್ಯಕಲಾವಿದ ಮಹಾಮನಿ ಆಗ್ರಹ

KannadaprabhaNewsNetwork | Published : Sep 5, 2024 12:32 AM

ಸಾರಾಂಶ

Comedian Mahamani demands repair of roads

-ಸರ್ಕಾರ ದುರಸ್ತಿ ಮಾಡದಿದ್ದರೆ ನಾಗರಿಕರಿಂದ ಚಂದಾ ಎತ್ತಿ ದುರಸ್ತಿ ಮಾಡುತ್ತೇವೆ

-ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಸಾತ್ವಿಕ ಆಕ್ರೋಶ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಮಳೆಯಿಂದ ಜಿಲ್ಲಾದ್ಯಂತ ಹಾನಿಗೊಳಗಾಗಿರುವ ಪ್ರಮುಖ ರಸ್ತೆಗಳು ಸೇರಿದಂತೆ ವಿಶೇಷವಾಗಿ ನಗರದ ವಿವಿಧೆಡೆ ರಸ್ತೆಗಳು ದೊಡ್ಡ ಗುಂಡಿಗಳಾಗಿವೆ. ಇದರಿಂದ ಜನ ಸುಗಮ ಸಂಚಾರ ನರಕಮಯವಾಗಿದ್ದು, ತಕ್ಷಣ ಒಂದು ವಾರದಲ್ಲಿ ದುರಸ್ತಿ ಕೈಗೊಳ್ಳದೇ ಇದ್ದಲ್ಲಿ ಜನರಿಂದ ಚಂದಾ ಸಂಗ್ರಹಿಸಿ ನಾವೇ ರಸ್ತೆ ದುರಸ್ತಿ ಮಾಡಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿ ವಾಡಿಕೆಗಿಂತ ಮೊದಲೇ ಮಳೆಗಾಲ ಆರಂಭವಾಗಿದ್ದು, ಮೇ ತಿಂಗಳ ಕೊನೆಯಿಂದ ಮಳೆ ಬರುತ್ತಿದ್ದು, ಮೊದಲೇ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದ್ದ ರಸ್ತೆಗಳು ಸತತ ಮಳೆಗೆ ಇನ್ನಷ್ಟು ದೊಡ್ಡ ಗುಂಡಿಗಳು ಬಿದ್ದ ಪರಿಣಾಮ ಜನ ಸಂಚಾರ ನರಕ ಸಂಚಾರವಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಜ್ ರಸ್ತೆ, ವಡಗೇರಾ ಕ್ರಾಸ್, ಭೀಮಾನದಿ ಮೇಲಿನ ಸೇತುವೆಯ ಮಧ್ಯೆಯು ಗಡಿಗೆ ಗುಂಡಿಗಳು ಬಿದ್ದಿವೆ. ಬಸ್ ನಿಲ್ದಾಣ ರಸ್ತೆ, ಬಾಲಾಜಿ ದೇವಸ್ಥಾನ ರಸ್ತೆ ವಿಶೇಷವಾಗಿ ಶಾಸಕರ ಜನಸಂಪರ್ಕ ಕಚೇರಿ ಎದುರಿಗೆ ಸೇರಿದಂತೆ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿವೆ. ಇಷ್ಟೆಲ್ಲ ಅನಾಹುತ ಆಗಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಕೆಲಸ ಮಾಡದೇ ತೆಪ್ಪಗೆ ಕುಳಿತಿರುವುದು ನಾಗರಿಕ ಸಮಾಜ ಪ್ರಜ್ಞಾವಂತ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿ ಇದೇನು ಜಿಲ್ಲಾ ಕೇಂದ್ರವೋ ಕಾಡು ಪ್ರದೇಶವೋ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿಯೇ ಈ ರೀತಿ ಹದಗೆಟ್ಟ ರಸ್ತೆಗಳು ಕಂಡೂ ಕಾಣದಂತೆ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಅದೇ ರಸ್ತೆ ಮೇಲೆ ತಿರುಗಾಡುತ್ತಿದ್ದರೂ ಪ್ರಜ್ಞೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುವಂತಾಗಿದೆ.

ಈ ಮಟ್ಟದಲ್ಲಿ ಆಡಳಿತ ಯಂತ್ರ ಕುಸಿತ ಕಂಡಿದ್ದು ಜಿಲ್ಲೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಎಂದ ಅವರು, ಕೂಡಲೇ ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ನಾಗರಿಕರು ಸೇರಿಕೊಂಡು ಚಂದಾ ಎತ್ತುವ ಮೂಲಕ ರಸ್ತೆ ದುರಸ್ತಿ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

----

ಫೋಟೊ: 4ವೈಡಿಆರ್2: ಬಸವರಾಜ ಮಹಾಮನಿ, ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಯಾದಗಿರಿ.

Share this article