ಜಿಲ್ಲಾದ್ಯಂತ ಧ್ರುವನಾರಾಯಣ ಪ್ರಥಮ ವರ್ಷದ ಪುಣ್ಯಸ್ಮರಣೆ

KannadaprabhaNewsNetwork | Published : Mar 12, 2024 2:06 AM

ಸಾರಾಂಶ

ಜಿಲ್ಲೆಯ ಅಭಿವೃದ್ದಿಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ಬಹಳಷ್ಟು ಪರಿಶ್ರಮ ವಹಿಸಿದ್ದು, ಅವರು ಅಭಿವೃದ್ದಿಯ ಹರಿಕಾರರೆಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ಬಹಳಷ್ಟು ಪರಿಶ್ರಮ ವಹಿಸಿದ್ದು, ಅವರು ಅಭಿವೃದ್ದಿಯ ಹರಿಕಾರರೆಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಮಾಜಿ ಸಂಸದ ಆರ್. ಧ್ರುವನಾರಾಯಣ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ರಾಜಕಾರಣಿ ಯಾವ ರೀತಿ ಇರಬೇಕು ಎನ್ನುವುದಕ್ಕೆ ಧ್ರುವನಾರಾಯಣ ಉತ್ತಮ ಉದಾಹರಣೆ. ಜನರೊಂದಿಗೆ ಬೆರೆಯುವುದು, ಸೌಜನ್ಯದಿಂದ ವರ್ತಿಸುತ್ತಿದ್ದ ರೀತಿ ಸೇರಿದಂತೆ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂಬ ಕುರಿತು ಧ್ರುವನಾರಾಯಣರಿಂದ ಬಹಳಷ್ಟು ಕಲಿತಿದ್ದೇವೆ. ಎರಡು ಬಾರಿ ಶಾಸಕರಾಗಿ, ಸಂಸದರಾಗಿ ಉತ್ತಮ ಕಾರ್ಯವನ್ನು ಮಾಡುವ ಜೊತೆಗೆ ಜಿಲ್ಲೆಗೆ ಶಾಶ್ವತವಾದ ಯೋಜನೆಗಳನ್ನು ತಂದರು. ಕೇಂದ್ರದ ಅನುದಾನವನ್ನು ಬಳಸಿಕೊಳ್ಳುವಲ್ಲಿ ಧ್ರುವನಾರಾಯಣ ಸಿದ್ದಹಸ್ತರು. ಅಲ್ಲದೇ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದು, ದೆಹಲಿ ಮಟ್ಟದಲ್ಲಿ ಪ್ರಭಾವ ಬೆಳೆಸಿ, ಸಚಿವರು, ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ, ಕ್ಷೇತ್ರಕ್ಕೆ ಪ್ರಮುಖ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸಂಪರ್ಕ ರಸ್ತೆಗಳು, ಕೇಂದ್ರಿಯ ವಿದ್ಯಾಲಯ, ಕೃಷಿ ಕಾಲೇಜು, ಮೆಡಿಕಲ್ ಕಾಲೇಜು, ಏಕಲವ್ಯ ಶಾಲೆ ಸೇರಿದಂತೆ ಹತ್ತಾರು ಹೊಸ ಯೋಜನೆಗಳನ್ನು ತಂದು ಅದು ಕಾರ್ಯಗತವಾಗುವವರೆಗೆ ಶ್ರಮಿಸುತ್ತಿದ್ದರು. ಯುವ ರಾಜಕಾರಣಿಗಳಿಗೆ ಅವರು ಮಾದರಿಯಾಗಿದ್ದಾರೆ ಎಂದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಧ್ರುವನಾರಾಯಣರು ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಪ್ರಥಮ ಸಂಸದ ಹಾಗೂ ದೇಶದಲ್ಲಿ ನಾಲ್ಕನೇ ಸಂಸದರಾಗಿ ಹೆಸರು ಮಾಡಿದ್ದರು ಎಂದು ಹೇಳಿಕೊಳ್ಳುವುದೇ ಹೆಮ್ಮೆ. ಅವರೊಂದಿಗಿನ ಒಡನಾಟ ಮತ್ತು ಸ್ನೇಹ ಚಿರಸ್ಮರಣೀಯ. ಇಂದು ಕಾಡಾ ಅಧ್ಯಕ್ಷಗಿರಿ ಹುದ್ದೆ ನನಗೆ ಸಿಕ್ಕದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಧ್ರುವನಾರಾಯಣ ಅವರು. ಜಿಲ್ಲಾಧ್ಯಕ್ಷನಾಗಿ ಅವರೊಂದಿಗೆ ಕೆಲಸ ಮಾಡುವುದೇ ಒಂದು ರೀತಿಯಲ್ಲಿ ಸಂತೋಷ ಉಂಟು ಮಾಡುತ್ತಿತ್ತು. ತಮ್ಮ ಸಂಪೂರ್ಣ ಜೀವನವನ್ನು ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಾಗಿಟ್ಟಿದ್ದರು. ಪಕ್ಷದ ಕಾರ್ಯಾಧ್ಯಕ್ಷರಾಗಿ ವರಿಷ್ಠರು ನೀಡಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದ ರೀತಿಯೇ ನಮ್ಮೆಲ್ಲರಿಗು ಸ್ಪೂರ್ತಿಯಾಗುತ್ತಿತ್ತು ಎಂದು ಅವರ ಸೇವೆಯನ್ನು ಸ್ಮರಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಜಿಪಂ ಮಾಜಿ ಸದಸ್ಯ ಸದಾಶಿವಮೂರ್ತಿ, ಕಾಗಲವಾಡಿ ಚಂದ್ರು, ಸೈಯದ್ ರಫಿ, ಸಿ.ಎ.ಮಹದೇವಶೆಟ್ಟಿ, ಮುಖಂಡರಾದ ಆಲೂರು ಪ್ರದೀಪ್, ಸುಹೇಲ್ ಆಲಿ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ನಾಗಶ್ರೀ, ಮಾದಲಾಂಬಿಕೆ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ಉಪಾಧ್ಯಕ್ಷ ಪುರುಷೊತ್ತಮ್, ಪಿ. ಶೇಖರ್, ಅರುಣ್, ರವಿಬಿಸಲವಾಡಿ, ಮಹದೇವಯ್ಯ, ವೈ.ಪಿ. ರಾಜೇಂದ್ರ, ಮೋಹನ್ ನಗು, ನಾಗೇಂದ್ರ ನಾಯಕ, ಅಕ್ಷಯ್, ಜಯಸಿಂಹ ಮೊದಲಾದವರು ಇದ್ದರು.

Share this article