ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ‘ಮುಂಗಾರು ಹಾಗೂ ಬರ ನಿರ್ವಹಣೆ’ಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ಕೊಠಡಿಗಳು ಸೇರಿ ಆಸ್ಪತ್ರೆ ಆವರಣ ಸ್ವಚ್ಛತೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಪಾವಗಡದಲ್ಲಿ ನಡೆದಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಜಿಲ್ಲೆಯ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ನಡೆಸಲಾಗಿದ್ದು, ಕುಡಿಯುವ ನೀರಿನ ಪರೀಕ್ಷೆಯಲ್ಲಿ ನೀರಿನ ಅಶುದ್ಧತೆ ಬಗ್ಗೆ ವರದಿ ಬಂದ ತಕ್ಷಣ ಸಾರ್ವಜನಿಕರಿಗೆ ಅಶುದ್ಧ ಕುಡಿಯುವ ನೀರು ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದರಲ್ಲದೆ, ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಪಟೂರು ತಾಲೂಕಿನ ಈಚನೂರು ಕೆರೆಗೆ ಮಲೀನಯುಕ್ತ ನೀರು ಸೇರುತ್ತಿರುವ ಬಗ್ಗೆ ಇಂದೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಸಪ್ತಶ್ರೀ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್ ಮಾತನಾಡಿ, ಜಿಲ್ಲೆಯಾದ್ಯಂತ 103 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ಹಾಗೂ 5 ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕುಣಿಗಲ್ ತಹಸೀಲ್ದಾರ್ ಮಾತನಾಡಿ, ಮಳೆಯಿಂದ ತಾಲೂಕು ವ್ಯಾಪ್ತಿಯಲ್ಲಿ 3 ಮನೆಗಳು ಹಾನಿಗೀಡಾಗಿದ್ದು ಪರಿಶೀಲಿಸಲಾಗಿದೆ ಎಂದರು. ಗುಬ್ಬಿ ತಹಸೀಲ್ದಾರ್ ಆರತಿ ಮಾತನಾಡಿ, 15 ಮನೆಗಳು ಹಾನಿಯಾಗಿದ್ದು, ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ, ಒಬ್ಬ ವ್ಯಕ್ತಿ ಮೇಲೆ ಮರದ ಕೊಂಬೆ ಬಿದ್ದು ಕಾಲು ಮುರಿದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ತಹಸೀಲ್ದಾರರಿಂದ ಮಾಹಿತಿ ಪಡೆದು ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕು ತೋಟಗಾರಿಕೆ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಮಳೆಯಿಂದ ಹಾನಿಯಾಗಿರುವ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಮಹಜರ್ ನಡೆಸಿ ಅರ್ಹತೆ ಹೊಂದಿದ್ದರೆ ಅಂತಹ ಫಲಾನುಭವಿಗಳಿಗೆ ಶೀಘ್ರ ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯಾದ್ಯಂತ ಬರ ನಿರ್ವಹಣೆ ನಿಟ್ಟಿನಲ್ಲಿ ೨೧ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ರೈತರಿಂದ ಬೇಡಿಕೆಯಿಲ್ಲದ 6 ಮೇವಿನ ಬ್ಯಾಂಕುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಗಿರೀಶ್ ಬಾಬು ರೆಡ್ಡಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಮೇವಿನ ಬ್ಯಾಂಕ್ ಅಗತ್ಯತೆ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅವಶ್ಯಕತೆ ಇಲ್ಲದಿದ್ದಲ್ಲಿ ಅವುಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.