ಕನ್ನಡಪ್ರಭ ವಾರ್ತೆ ಮೈಸೂರುಅಮೇರಿಕದ ಟ್ರಂಪ್ ಸರ್ಕಾರ ಭಾರತದ ಮೇಲೆ ಹೇರಿರುವ ಶೇ. 50ರಷ್ಟು ನಿರ್ಭಂದ ( ಹೆಚ್ಚಿನ ಅಮದು ಶುಲ್ಕ) ವನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿ ರಾವ್ ಮತ್ತು ಪಧಾದಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ.2024-25ರಲ್ಲಿ ಭಾರತವು ಸುಮಾರು 87 ಬಿಲಿಯನ್ ಡಾಲರ್ ರಫ್ತನ್ನು ಅಮೇರಿಕಾಗೆ ಮಾಡುವುದರ ಮೂಲಕ, ಅಮೇರಿಕಾ ಮತ್ತು ಭಾರತದ ವ್ಯಾಪಾರ ವ್ಯವಹಾರಗಳ ಸಮತೋಲನ ಭಾರತದ ಪರವಾಗಿತ್ತು. (ಸುಮಾರು 40 ಬಿಲಿಯನ್ ಡಾಲರ್ ನ ರಫ್ತು ಹೆಚ್ಚಳ) ಇದರಲ್ಲಿ ಶೇ. 66 ಅಂದರೆ ಸುಮಾರು 60 ಬಿಲಿಯನ್ ಡಾಲರ್ ಈ ಶೇ. 50 ತೆರಿಗೆ ಹೆಚ್ಚಳದ ವ್ಯಾಪ್ತಿಗೆ ಬರುವುದರಿಂದ ಭಾರತದ ಜವಳಿ ಹಾಗೂ ಸಿದ್ಧಪಡಿಸಿದ ಬಟ್ಟೆ, ಅಮೂಲ್ಯ ರತ್ನಗಳು ಮತ್ತು ಆಭರಣಗಳು, ಚರ್ಮದ ಉತ್ಪನ್ನಗಳು, ಸಾಗರೋತ್ಪನ್ನಗಳು ಮತ್ತು ಎಂಜೀನಿಯರಿಂಗ್ ವಸ್ತುಗಳಿಗೆ ದೊಡ್ಡ ಪೆಟ್ಟನ್ನು ಕೊಟ್ಟಾಂತಾಗುತ್ತದೆ ಎಂದರು.ಈ ಕಾರಣ ಭಾರತದಲ್ಲಿ ಅತಿಯಾದ ಉದ್ಯೋಗ ಕಡಿತದ ಭೀತಿಯನ್ನು ಎದುರಿಸಬೇಕಾಗಬಹುದು. ಇದು ನೇರವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳಿಗೆ ತೀವ್ರವಾದ ಆಘಾತವನ್ನುಂಟು ಮಾಡಿದೆ. ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ ಭಾರತದ 2025-26ರ ಆರ್ಥಿಕ ಪ್ರಗತಿಯು ಶೇ. 6.5 ನಿಂದ 6.3 ಗೆ ಕುಂಠಿತವಾಗುವ ಎಲ್ಲಾ ಸಂಭವವಿದೆ. ಈ ಆರ್ಥಿಕ ಪ್ರಗತಿಯ ಇಳಿಕೆಯನ್ನು ಆ. 15 ರಂದು ಪ್ರಧಾನಿಗಳು ಕೆಂಪುಕೋಟೆಯ ಮೇಲಿಂದ ಘೋಷಣೆ ಮಾಡಿದ ಜಿ.ಎಸ್.ಟಿ ತಗ್ಗಿಸುವ ಕ್ರಮದಿಂದ ಸ್ವದೇಶಿ ಉತ್ಪನ್ನಗಳು ಬಳಿಕೆಯಾಗಿ ಬೇಡಿಕೆಯು ಹೆಚ್ಚಾಗಿ ಭಾರತದ ಆರ್ಥಿಕತೆಯು ಕೂಡ ವೃದ್ದಿಯಾಗುತ್ತದೆ. ಆರ್ಥಿಕತೆಯ ಇಳಿಕೆಯನ್ನು ಸರಿದೋಗಿಸಬಹುದು. ವೋಕಲ್ ಫೋರ್ ಲೋಕಲ್ ಗೆ ಹೆಚ್ಚು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದರು.ಈ ಹಂತದಲ್ಲಿ, ಭಾರತದ ಜನರು ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ನಿರ್ಮಿತ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುವುದರ ಮೂಲಕ ಈ ಸಮಸ್ಯೆಗೆ ತಕ್ಕ ಮಟ್ಟಿಗೆ ಸುಧಾರಣೆ ಕಂಡುಕೊಳ್ಳಬಹುದು. ಈಗಾಗಲೇ ಕೇಂದ್ರ ಸರ್ಕಾರವು ಪರ್ಯಾಯ ಮಾರ್ಗವಾಗಿ ಸುಮಾರು 40 ದೇಶಗಳಿಗೆ ರಫ್ತನ್ನು ಮಾಡುವುದರ ಮೂಲಕ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರವು ಬಾಧಿತ ಕೈಗಾರಿಕೋದ್ಯಮಿಗಳಿಗೆ ರಿಯಾಯಿತಿಯನ್ನು, ತೆರಿಗೆ ವಿನಾಯಿತಿ, ಬಡ್ಡಿ ದರ ವಿನಾಯಿತಿ ಮುಂತಾದ ಪ್ರೋತ್ಸಾಹಕಾರಿ ಕ್ರಮ ರೂಪಿಸಿವುದರ ಮೂಲಕ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಆಗ್ರಹಿಸಿದ್ದಾರೆ.