ರಾಮನಗರ: ಕಳಂಕಿತ ನೈಸ್ ಕಂಪನಿಗೆ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಬೆಂಗಳೂರಿನಿಂದ ಮೈಸೂರಿನವರೆಗೆ ಹೆದ್ದಾರಿ ರಸ್ತೆ ನಿರ್ಮಾಣ ಸಂಬಂಧ ಸರ್ಕಾರ ನೈಸ್ ಕಂಪನಿ ಜೊತೆ ಕ್ರಿಯಾ ಒಪ್ಪಂದ ಮಾಡಿಕೊಂಡು 28 ವರ್ಷಗಳು ಕಳೆದಿದ್ದು, ನೈಸ್ ರಸ್ತೆ ನಿರ್ಮಾಣ ಕಾರ್ಯಗತವಾಗಿಲ್ಲ. ಈ ಯೋಜನೆಗೆ ಗುರುತಿಸಲಾಗಿದ್ದ ರೈತರ ಭೂಮಿಯ ಸ್ವಾಧೀನವನ್ನು ರದ್ದುಪಡಿಸದೆ ಹಾಗೇಯೆ ಮುಂದುವರಿಸಿಕೊಂಡು ಬರುತ್ತಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಟೀಕಿಸಿದರು.
ರೈತರು ಹಾಗೂ ರೈತ ಮುಖಂಡರ ಮೇಲೆ ನಿಂದನೆ, ಬೆದರಿಕೆ ಮುಂತಾದ ನೈಸ್ ಕಂಪನಿ ದೌರ್ಜನ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನೈಸ್ ಅಕ್ರಮಗಳ ವಿರುದ್ಧದ ಹೋರಾಟಗಾರ ರೈತ ನಾಯಕ ಎನ್.ವೆಂಕಟ ಚಲಯ್ಯರವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರೈತರ ಒಪ್ಪಿಗೆ ಇಲ್ಲದ, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ವರಲಕ್ಷ್ಮಿ ಆಗ್ರಹಿಸಿದರು.ರಾಜ್ಯ ಪ್ರಾಂತ ರೈತಸಂಘ ಜಿಲ್ಲಾ ಸಂಚಾಲಕ ಅಂಕಪ್ಪ ಮಾತನಾಡಿ, ನೈಸ್ ಆಕ್ರಮ ಕುರಿತ ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಪಾರಸ್ಸುಗಳನ್ನು ಜಾರಿಗೊಳಿಸಬೇಕು. ಕೆಐಎಡಿಬಿ ಹಾಗೂ ನೈಸ್ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನೈಸ್ ಭೂ ಸ್ವಾಧೀನ ಹೋರಾಟ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ರಾದ ಸಿದ್ದರಾಮಯ್ಯ, ಕುಂಟೀರಪ್ಪ, ಜಿಲ್ಲಾ ಕಾರ್ಯ ದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ರಾಜೇಶ್, ನಗರ ಜಿಲ್ಲಾ ಉಪಾಧ್ಯಕ್ಷ ಸಣ್ಣ ರಂಗಯ್ಯ ಮತ್ತಿತರರು ಭಾಗವಹಿಸಿದ್ದರು.
-ವರಲಕ್ಷ್ಮಿ, ರಾಜ್ಯಾಧ್ಯಕ್ಷೆ, ಸಿಐಟಿಯು
ರಾಮನಗರದ ಐಜೂರು ವೃತ್ತದಲ್ಲಿ ರಾಜ್ಯ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.