ಬಣ್ಣದೋಕುಳಿಯಲ್ಲಿ ಮಿಂದೆದ್ದ ವಾಣಿಜ್ಯ ನಗರಿ

KannadaprabhaNewsNetwork |  
Published : Mar 19, 2025, 12:31 AM IST
uaNf | Kannada Prabha

ಸಾರಾಂಶ

ಸುಡು ಬಿಸಿಲನ್ನು ಲೆಕ್ಕಿಸದೇ ಜನತೆ ಬಣ್ಣದೋಕುಳಿಯಲ್ಲಿ ಪಾಲ್ಗೊಂಡರು. ಇಲ್ಲಿನ ಹೊಸ ಮೇದಾರ ಓಣಿ, ಕಮರಿಪೇಟೆ, ಬಾಣಿ ಓಣಿಯಲ್ಲಿ ಡಿಜೆಗೆ ಸಾವಿರಾರು ಯುವಕರು ಹೆಜ್ಜೆಹಾಕಿದರು.

ಹುಬ್ಬಳ್ಳಿ: ಹೋಳಿಹುಣ್ಣಿಮೆಯ ಐದನೇ ದಿನವಾದ ಮಂಗಳವಾರ ವಾಣಿಜ್ಯನಗರಿ ಹುಬ್ಬಳ್ಳಿಯು ಬಣ್ಣದಲ್ಲಿ ಮಿಂದೆದ್ದಿತು. ಮಕ್ಕಳು, ಯುವಕ-ಯುವತಿಯರು ಹಲಗೆ ಬಾರಿಸಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಇನ್ನೂ ಕೆಲವರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು.

ಸುಡು ಬಿಸಿಲನ್ನು ಲೆಕ್ಕಿಸದೇ ಜನತೆ ಬಣ್ಣದೋಕುಳಿಯಲ್ಲಿ ಪಾಲ್ಗೊಂಡರು. ಇಲ್ಲಿನ ಹೊಸ ಮೇದಾರ ಓಣಿ, ಕಮರಿಪೇಟೆ, ಬಾಣಿ ಓಣಿಯಲ್ಲಿ ಡಿಜೆಗೆ ಸಾವಿರಾರು ಯುವಕರು ಹೆಜ್ಜೆಹಾಕಿದರು. ಮರಾಠಾಗಲ್ಲಿ, ಹೊಸ ಮೇದಾರ ಓಣಿಯಲ್ಲಿ ನಿರ್ಮಿಸಲಾಗಿದ್ದ ಸ್ಪಿಂಕ್ಲರ್(ರೇನ್) ನೀರಿನಿಂದ ಹುಮ್ಮಸ್ಸು ಪಡೆಯುತ್ತಿದ್ದ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು.

ಮೆರುಗು ತಂದ ಹೋಳಿಸಂಭ್ರಮ

ಮೇದಾರ ಓಣಿ, ಮರಾಠಾಗಲ್ಲಿ, ಕಮರಿಪೇಟೆ, ಅಂಚಟಗೇರಿ ಓಣಿ, ಲತ್ತಿಪೇಟ, ಚೆನ್ನಪೇಟ, ಅವರಾದಿ ಓಣಿ, ವೀರಾಪುರ ಓಣಿ, ಹೆಗ್ಗೇರಿ, ತಾಜ್ ನಗರ, ಏಕತಾ ನಗರ, ಹೊಸೂರು, ವೀರಾಪುರ ಓಣಿ, ಶೀಲವಂತರ ಓಣಿ, ನೇಕಾರ ನಗರ, ಬಂಕಾಪುರ ಚೌಕ್, ಜಂಗ್ಲಿಪೇಟ, ಅಕ್ಕಿಪೇಟ, ಇಂಡಿಪಂಪ್ ಬಳಿ, ಹಳೇ ಹುಬ್ಬಳ್ಳಿ, ಆರೂಢ ನಗರ, ಆನಂದ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಕ್ಕಳು, ಮಹಿಳೆಯರು ಮನೆಯ ಮುಂಭಾಗದಲ್ಲಿಯೇ ಭರ್ಜರಿಯಾಗಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.

ವಿದ್ಯಾನಗರ, ಗೋಕುಲ ರಸ್ತೆ, ದುರ್ಗದ ಬೈಲ್, ಲೋಹಿಯಾ ನಗರ, ನೆಹರು ನಗರ, ಶಿರೂರ ಪಾರ್ಕ್, ದೇಶಪಾಂಡೆ ನಗರ, ಕೇಶ್ವಾಪುರ, ಲಿಂಗರಾಜ ನಗರ, ದಾಜಿಬಾನ್ ಪೇಟೆ, ಕುಸುಗಲ್ಲ ರಸ್ತೆ, ಕಮರಿಪೇಟೆ, ನೇಕಾರ ನಗರ ಸೇರಿದಂತೆ ಹಲವೆಡೆ ಸೇರಿ ಹಲವೆಡೆಯೂ ಬಣ್ಣದೋಕುಳಿ ಮೆರಗು ತಂದಿತು.

ಮಧ್ಯಾಹ್ನ ರಂಗುಪಡೆದ ಹೋಳಿ

ಬೆಳಗಾಗುತ್ತಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಬಣ್ಣದೋಕುಳಿ ಸಣ್ಣ ಪ್ರಮಾಣದಲ್ಲಿ ಆರಂಭವಾಯಿತು. ಮಧ್ಯಾಹ್ನವಾಗುತ್ತಿದ್ದಂತೆ ರಂಗು ಪಡೆದುಕೊಂಡಿತು. ಯುವಕ- ಯುವತಿಯರಿಗೆ ಡಿಜೆ ಸದ್ದು, ರೇನ್ ಡ್ಯಾನ್ಸ್‌ ಕಾಣುತ್ತಿದ್ದಂತೆ ಅಲ್ಲಿಗೆ ತೆರಳಿ ಕೆಲಕಾಲ ಕುಣಿದು ಕುಪ್ಪಳಿಸಿ ವಾಪಸಾದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಕಾಮದಹನ

ಕಿತ್ತೂರು ರಾಣಿಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರು ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ವಿವಿಧೆಡೆ 5 ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ 400ಕ್ಕೂ ಅಧಿಕ ರತಿ-ಮನ್ಮಥರ ಮೂರ್ತಿಗಳನ್ನು ಟ್ರ್ಯಾಕ್ಟರ್, ಟಂಟಂ, ತಳ್ಳುಗಾಡಿಗಳಲ್ಲಿ ಮೆರವಣಿಗೆ ಮಾಡಿ ಸಂಜೆ ವಾರ್ಡಿನಲ್ಲಿರುವ ಪ್ರಮುಖ ವೃತ್ತಗಳಲ್ಲಿ ದಹನ ಮಾಡಿದರು.

ಬೈಕ್‌ ಮೇಲೆ ತಮಟೆ ಸದ್ದು

ಹೋಳಿ ಹಬ್ಬದ ಅಂಗವಾಗಿ ಯುವಕರು, ಮಹಿಳೆಯರು ಬೈಕ್‌, ಸ್ಕೂಟಿಗಳಲ್ಲಿ ಬಣ್ಣ ಎರಚುತ್ತ ಸಂಚರಿಸಿದರೆ ಇನ್ನೂ ಕೆಲವರು ಬೈಕ್‌ ಹಿಂಬದಿಯಲ್ಲಿ ಕುಳಿತು ತಮಟೆ, ಹಲಗೆ ಬಾರಿಸುತ್ತಾ ನಗರದಾದ್ಯಂತ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಜತೆಗೆ ಹಲವು ಯುವಕರು, ಮಕ್ಕಳು ಬಗೆಬಗೆಯ ಮುಖವಾಡಗಳನ್ನು ಧರಿಸಿ ಬೈಕ್‌ ಏರಿ, ಪೀಪಿ ಊದುತ್ತ, ಖೇಖೆ ಹೊಡೆಯುತ್ತ ಸಂಚರಿಸುತ್ತಿರುವುದು ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿತು.

ಮಹಾಸಂಗಮ

ಇಲ್ಲಿನ ಹಳೇಹುಬ್ಬಳ್ಳಿ ಮತ್ತು ಹೊಸಹುಬ್ಬಳ್ಳಿ ಮೇದಾರ ಸಮಾಜಗಳ ವತಿಯಿಂದ ಶತಶತಮಾನಗಳ ಇತಿಹಾಸವುಳ್ಳ 22 ಅಡಿ ಎತ್ತರದ ಬೃಹತ್ ಆಕಾರದ ಬಿದರಿನ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿನ ದುರ್ಗದ ಬೈಯಲಿನಲ್ಲಿ ಶತಶತಮಾನಗಳಿಂದ ಈ ಎರಡೂ ಕಾಮಣ್ಣರ ಮಹಾಸಂಗಮವು ನಡೆದುಕೊಂಡು ಬರುತ್ತಿತ್ತು. ಕಳೆದ 45 ವರ್ಷಗಳಿಂದ ಈ ಮಹಾಸಂಗಮ ನಿಂತುಹೋಗಿತ್ತು. ಆದರೆ, ಕಳೆದ ವರ್ಷದಿಂದ ಮತ್ತೆ ಎರಡೂ ಕಾಮಣ್ಣರ ಸಂಗಮ ಕಾರ್ಯಕ್ರಮ ನೆರವೇರುತ್ತಿದ್ದು, ಮಂಗಳವಾರವೂ ದುರ್ಗದ ಬೈಲಿನಲ್ಲಿ ನಡೆದ ಎರಡೂ ಬಿದಿರಿನಿಂದ ತಯಾರಿಸಿದ ಬೃಹತ್‌ ಕಾಮಣ್ಣಗಳ ಮಹಾಸಮಾಗಮವು ರಂಗಿನೋಕುಳಿಗೆ ಮೆರಗು ತಂದಿತು.ಭಾವೈಕ್ಯತೆಯ ಹೋಳಿ ಆಚರಣೆ

ಹುಬ್ಬಳ್ಳಿ ನಗರದ ಕಮರಿಪೇಟೆಯಲ್ಲಿ ಮಂಗಳವಾರ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಶಾಂತಿ-ಸೌಹಾರ್ದಯುತವಾಗಿ ಹೋಳಿ ಆಚರಿಸಿದರು. ಓಣಿಯ ಹಿಂದೂ ಹಾಗೂ ಮುಸ್ಲಿಂ ಸಮಾಜದ ಪ್ರಮುಖರು ಸೇರಿ ಪರಸ್ಪರ ಮಾಲೆ ಹಾಕಿ, ಬಣ್ಣ ಹಚ್ಚುವ ಮೂಲಕ ಸೌಹಾರ್ದತೆ ತೋರ್ಪಡಿಸಿದರು. ಮುಸಲ್ಮಾನ ಬಾಂಧವರು ಹಿಂದುಗಳಿಗೆ ತಂಪುಪಾನೀಯ ನೀಡಿದರು. ನಗರದ ಕಮರಿಪೇಟೆಗೆ ಭೇಟಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಸೌಹಾರ್ದ ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!