ಹುಬ್ಬಳ್ಳಿ:
ಹಿಂದುಗಳ ಪಾಲಿಗೆ ದೀಪಾವಳಿ ದೊಡ್ಡ ಹಬ್ಬ. 3 ದಿನದ ಈ ಹಬ್ಬಕ್ಕೆ ಸೋಮವಾರ ಶ್ರೀಕಾರವಾಗಿದ್ದು ಮೊದಲ ದಿನವಾದ ಸೋಮವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು.ನಗರದ ದುರ್ಗದಬೈಲ್, ಜನತಾ ಬಜಾರ, ರಾಣಿ ಚೆನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಶಹಾ ಬಜಾರ, ಗೋಕುಲ ರಸ್ತೆ, ಸರ್ವೋದಯ ವೃತ್ತ, ಗೋಪನಕೊಪ್ಪ, ರಮೇಶ ಭವನ, ಹಳೇ ಹುಬ್ಬಳ್ಳಿಯ ಸಂಡೆ ಮಾರ್ಕೇಟ್, ಇಂಡಿಪಂಪ್ ವೃತ್ತ, ಉಣಕಲ್ಲ ಕ್ರಾಸ್, ಸಾಯಿನಗರ, ವಿದ್ಯಾನಗರ, ಶಿರೂರ ಪಾರ್ಕ್, ಸಿಬಿಟಿ ಬಸ್ ನಿಲ್ದಾಣ, ಗಣೇಶಪೇಟೆ, ಕಮರಿಪೇಟೆ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಸೋಮವಾರ ಮಾರಾಟ ಮಾಡುತ್ತಿರುವುದು ಕಂಡುಬಂದಿತು.
ಏನೆಲ್ಲ ಮಾರಟಕ್ಕಿವೆ?:ಪೂಜೆಗೆ ಬೇಕಾದ ಹೂವು, ಕಾಯಿ, ಹಣ್ಣು, ಕಬ್ಬು, ಮಾವಿನ ಸೊಪ್ಪು, ಬಾಳೆಕಂದು, ಪೂಜಾ ಸಾಮಗ್ರಿ ಇತರೆ ಅಗತ್ಯ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಹಾಗಾಗಿ, ಹಬ್ಬದ ಆರಂಭದ ದಿನವಾದ ಸೋಮವಾರ ಈ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಕಂಡು ಬಂದಿತು. ಪೂಜೆಗೆ ಬೇಕಾದ ಸಣ್ಣ ಬೂದುಗುಂಬಳ ₹50 ರಿಂದ ಗಾತ್ರಕ್ಕೆ ತಕ್ಕಂತೆ ₹400ರ ವರೆಗೂ ಮಾರಾಟವಾದವು. ಹೂವಿನ ಬೆಲೆ ಗಣನೀಯ ಪ್ರಮಾಣ ಏರಿಕೆಯಾಗಿದೆ. ಕೆಜಿ ಸೇವಂತಿಗೆ ₹400-500, ಕೆಜಿ ಕನಕಾಂಬರಕ್ಕೆ ₹700ರಿಂದ ₹1100, ಕೆಜಿ ಮಲ್ಲಿಗೆಗೆ ₹800, ಕೆಜಿ ಚೆಂಡು ಹೂವಿಗೆ ₹100 ರಿಂದ ₹300, ಹೂವಿನ ಹಾರವೊಂದಕ್ಕೆ ₹50 ರಿಂದ ₹1000ದಂತೆ ಮಾರಾಟವಾಗುತ್ತಿದೆ. ಇನ್ನು ₹10ಕ್ಕೆ 2, 20ಕ್ಕೆ 3 ನಿಂಬೆಹಣ್ಣು ಸಿಗುತ್ತಿವೆ. ವಾಹನಗಳಿಗೆ ದೃಷ್ಟಿಗೆ ಹಾಕುವ ದಾರದಲ್ಲಿ ಸೇರಿಸಿರುವ ನಾಲ್ಕೈದು ಮೆಣಸಿನಕಾಯಿ, ಒಂದು ನಿಂಬೆಹಣ್ಣಿನ ಗುಚ್ಚಕ್ಕೆ ₹20ರಿಂದ ₹50ರ ವರೆಗೆ ಮಾರಾಟವಾಗುತ್ತಿದೆ. ಒಂದು ಜತೆ ಬಾಳೆಕಂಬಕ್ಕೆ ₹ 40, ₹ 50 ರಿಂದ ₹ 400, ಒಂದು ತೆಂಗಿನಕಾಯಿಗೆ ₹35ರಿಂದ 50, ಒಂದು ಹಿಡಿ ಮಾವಿನ ಸೊಪ್ಪಿಗೆ ₹ 20ರಿಂದ 30ಕ್ಕೆ, ಪೂಜೆಗೆ ಬೇಕಾದ 5 ಜತೆ ಹಣ್ಣಿಗೆ ₹100ರಿಂದ ₹300ರ ವರೆಗೆ ದರ ನಿಗದಿ ಮಾಡಲಾಗಿದೆ. ಇದಲ್ಲದೆ ತರಕಾರಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು.
ಅಮವಾಸೆ ಪೂಜೆ...ದೀಪಾವಳಿ ಅಮಾವಾಸ್ಯೆ ಸೋಮವಾರ ಸಂಜೆಯೇ ಕೂಡಿಕೊಂಡಿದೆ. ಹೀಗಾಗಿ ಕೆಲವರು ಸೋಮವಾರ ಸಂಜೆ ಲಕ್ಷ್ಮಿ ಪೂಜೆ ಮಾಡಿದರೆ, ಮತ್ತೆ ಹಲವು ಮಂಗಳವಾರ ಬೆಳಗ್ಗೆ ಹಾಗೂ ಸಂಜೆ ಲಕ್ಷ್ಮಿ ಪೂಜೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಗೋಕುಲ ರಸ್ತೆಯಲ್ಲಿನ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಎಂಎಸ್‌ಎಂಇಗಳಲ್ಲಿ ಬಹುತೇಕ ಕಡೆಗಳಲ್ಲಿ ಸೋಮವಾರ ಸಂಜೆಯೇ ಲಕ್ಷ್ಮಿ ಪೂಜೆ ಮಾಡಲಾಗಿದೆ.ಸಂಚಾರ ದಟ್ಟಣೆಗೆ ಹೈರಾಣು
ದೀಪಾವಳಿ ಹಬ್ಬದ ಅಂಗವಾಗಿ ನಗರದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೂ ವಾಹನ ಸಂಚಾರ ದಟ್ಟಣೆ ಕಂಡು ಬಂತು. ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾದು ಸುಸ್ತಾದರು. ಇಲ್ಲಿನ ಶಾಹ ಬಜಾರ್, ದುರ್ಗದ ಬೈಲ್, ಸ್ಟೇಷನ್ ರಸ್ತೆ, ಚೆನ್ನಮ್ಮ ವೃತ್ತ, ನಿಲಿಜಿನ್ ರಸ್ತೆ, ಹಳೇ ಕೋರ್ಟ್ ರಸ್ತೆ ಸೇರಿದಂತೆ ಹಲಔಏಡೆ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಸುಗಮ ಸಂಚಾರಗೊಳಿಸಲು ಪೊಲೀಸರು ಹೈರಾಣಾದರು.20ಎಚ್‌ಯುಬಿ26ರಿಂದ 29
ದೀಪಾವಳಿ ಹಿನ್ನೆಲೆಯಲ್ಲಿ ಸೋಮವಾರ ಹುಬ್ಬಳ್ಳಿಯ ಮಾರುಕಟ್ಟೆಯೊಂದರಲ್ಲಿ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಜನತೆ ಖರೀದಿಸುತ್ತಿರುವುದು.