ವಾಣಿಜ್ಯ ಅನಿಲ ಸಿಲಿಂಡರ್‌ ದರ ಏರಿಕೆ: ಹೋಟೆಲ್‌ ಮಾಲೀಕರ ಸಂಘ ಖಂಡನೆ

KannadaprabhaNewsNetwork |  
Published : May 02, 2026, 01:15 AM IST
34 | Kannada Prabha

ಸಾರಾಂಶ

19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಮೈಸೂರಿನಲ್ಲಿ 991 ರು. ಹೆಚ್ಚಿಸಿರುವುದು ಖಂಡನೀಯ. ಇತಿಹಾಸದಲ್ಲಿಯೇ ಈ ಮಟ್ಟದ ಬೆಲೆ ಏರಿಕೆ ಆಗಿರಲಿಲ್ಲ. ಈ ರೀತಿಯ ಬೆಲೆ ಏರಿಕೆಯಿಂದ ಆತಿಥ್ಯ ಉದ್ಯಮವೇ ನಲುಗಿಹೋಗುವಂತೆ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆಯನ್ನು 991 ರು. ಹೆಚ್ಚಿಸಿರುವುದನ್ನು ಮೈಸೂರು ಹೋಟೆಲ್‌ಮಾಲೀಕರ ಸಂಘ ಖಂಡಿಸಿದೆ.

ಈ ಸಂಬಂಧ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಅವರು, 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಮೈಸೂರಿನಲ್ಲಿ 991 ರು. ಹೆಚ್ಚಿಸಿರುವುದು ಖಂಡನೀಯ. ಇತಿಹಾಸದಲ್ಲಿಯೇ ಈ ಮಟ್ಟದ ಬೆಲೆ ಏರಿಕೆ ಆಗಿರಲಿಲ್ಲ. ಈ ರೀತಿಯ ಬೆಲೆ ಏರಿಕೆಯಿಂದ ಆತಿಥ್ಯ ಉದ್ಯಮವೇ ನಲುಗಿಹೋಗುವಂತೆ ಆಗಿದೆ ಎಂದರು.

ಹೋಟಲುಗಳನ್ನೇ ನಂಬಿರುವ ಗ್ರಾಹಕರು, ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಅನಿಲ ಬೆಲೆ ಶೇ. 25ರಷ್ಟು ಹೆಚ್ಚಿಸಿದೆ. ಈ ಮಟ್ಟಕ್ಕೆ ಹೆಚ್ಚಿಸಿರುವುದರಿಂದ ಎಲ್ಲಾ ಪದಾರ್ಥಗಳು ಹೆಚ್ಚಾಗುತ್ತದೆ. ಹೋಟಲು ತಿಂಡಿಗಳು ಉಟೋಪಚಾರ ಬೆಲೆಗಳು ಆಕಾಶಕ್ಕೇರಿ ಜನ ಜೀವನ ಶೈಲಿ ಅಸ್ತವ್ಯಸ್ತವಾಗುತ್ತದೆ. ಜೀವನ ನಡೆಸುವುದಕ್ಕೆ ತುಂಬಾ ದುಬಾರಿಯಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಹಲವಾರು ತೆರಿಗೆಗಳು ಜಿಎಸ್‌.ಟಿ ಮೂಲಕ ಸಂಗ್ರಹ ಮಾಡುತ್ತಿದ್ದು ಅಪಾರವಾದ ತೆರಿಗೆ ಸರ್ಕಾರಕ್ಕೆ ಬರುತ್ತಿದೆ. ಇರಾನ್-ಅಮೆರಿಕ ಮತ್ತು ಇಸ್ರೇಲ್ ಯುದ್ದ ಮುಗಿಯುವವರಿಗೂ ಜಿ.ಎಸ್‌.ಟಿ ಮೊತ್ತ ಸರಿದೂಗಿಸಿಕೊಂಡು ಏರಿಸಿರುವ ಬೆಲೆ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಅಗತ್ಯ ವಸ್ತುಗಳನ್ನು ಯಾವುದೇ ಕಾರಣಕ್ಕೂ ಈ ಮಟ್ಟಕ್ಕೆ ಏರಿಸಲೇಬಾರದು. ಬೇರೆಯ ತೆರಿಗೆಗಳಲ್ಲಿ ಸರಿತೂಗಿಸಿಕೊಳ್ಳಬೇಕು. ಲಾಭದಾಯಕ ಉದ್ದೇಶವನ್ನು ಮೊದಲು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.

2026ರಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಬೆಲೆ ಏರುತ್ತಲೇ ಇದೆ. ಜನವರಿಯಲ್ಲಿ 1,774.50, ಫೆಬ್ರವರಿಯಲ್ಲಿ 1,794.50, ಮಾರ್ಚ್‌1ರಂದು 1,824, ಮಾ. 7 ರಂದು 1,938, ಏಪ್ರಿಲ್‌1 ರಂದು 2,141 ರು. ಮೇ 1 ರಂದು 3,132 ರು. ಹೆಚ್ಚಿಸಿರುವುದು ಸರಿಯಲ್ಲ. ಅಂದರೆ ಮಾ. 1 ರಿಂದ ಮೇ 1 ರವರೆಗೆ ಒಟ್ಟು 1,440 ರು. ಏರಿಕೆಯಾಗಿದೆ. ಇದರಿಂದಾಗಿ ಉಪಹಾರ ದರ್ಶಿನಿಗಳು, ಮೆಸ್‌ಗಳು ಮತ್ತು ಹೊಟೇಲ್‌ಗಳ ಮೇಲೆ ಅಪಾರ ಹಾನಿಯನ್ನುಂಟು ಮಾಡಿದೆ ಎಂದು ಕಿಡಿಕಾರಿದರು.

ಈಗಾಗಲೇ ವಿದ್ಯುತ್‌ ಶುಲ್ಕ, ನೀರಿನ ಶುಲ್ಕ, ಕಾರ್ಮಿಕರ ವೇತನ ಸೇರಿದಂತೆ ಹಲವು ರಹದಾರಿಗಳ ಶುಲ್ಕ ಹೆಚ್ಚಿಸಲಾಗಿದೆ ಎಂದು ಅವರು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುದ್ಧ, ಬಸವ ತತ್ವ ಅಳವಡಿಕೆಯಿಂದ ಸಮಾನತೆ ಸಾಧ್ಯ
ಚಿತ್ರದುರ್ಗದಲ್ಲಿ ಸುಸಜ್ಜಿತ ಬುದ್ಧ ಭವನ ನಿರ್ಮಾಣ