ಕನ್ನಡಪ್ರಭವಾರ್ತೆ ಗುಳೇದಗುಡ್ಡಸಾಕಷ್ಟು ಶಿಕ್ಷಣ ಕ್ಷೇತ್ರ ಬೆಳೆದಿದ್ದರೂ ವ್ಯಾವಹಾರಿಕವಾಗಿ ಬದಲಾಗಿದೆ. ಇದರಿಂದ ಬಡವರು ವಂಚಿತರಾಗುತ್ತಿದ್ದಾರೆ ಎಂದು ಸಂಪನ್ಮೂಲ ಶಿಕ್ಷಕ ಸಂಗಮೇಶ ಮುತ್ತಗಿ ವಿಷಾದ ವ್ಯಕ್ತಪಡಿಸಿದರು.
ಗುರುವಾರ ರಾಷ್ಟ್ರೋತ್ಥಾನ ಪರಿಷತ್, ಪ್ರಶಿಕ್ಷಣ ಭಾರತಿ ಜಿಲ್ಲಾ ಘಟಕದ ಆಶ್ರಯದಲ್ಲಿ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಕರ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರ ಉಳ್ಳವರ ಆಸ್ತಿಯಾಗುತ್ತಿದೆ. ವಿದ್ಯಾವಂತ, ಆಸಕ್ತ ವಿದ್ಯಾಥಿಗಳಿಗೆ ಉನ್ನತ ಶಿಕ್ಷಣ ಎಟುಕದಂತಾಗಿದೆ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶಿಕ್ಷಕರ ಶ್ರಮ ಅಗತ್ಯವಾಗಿದೆ. ವಿದ್ಯಾರ್ಥಿಗಳನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡಬೇಕು. ಶಿಕ್ಷಣ ವ್ಯವಸ್ಥೆ ಇಂದು ವ್ಯವಹಾರಿಕವಾಗಿ ಬದಲಾಗಿದೆ. ನಿಜ, ಆದರೆ ವ್ಯವಹಾರದ ಮಧ್ಯೆಯೂ ಉತ್ತಮ ಪ್ರಜೆಗಳಾಗಿ ದೇಶ ಸೇವೆ ಮಾಡುವ ಗುರಿ ಹೊಂದುವಂತೆ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡುವ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಭಾವಿ ಶಿಕ್ಷಕರಾಗುವ ಕಾರ್ಯ ಮಾಡಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಬದಲಾವಣೆ, ದೇಶದ ಅಭಿವೃದ್ಧಿ ಶಿಕ್ಷಕರ ಕೈಯಲ್ಲಿದೆ. ಎಲ್ಲ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಹೆಗಲಮೇಲಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಪರ ಜೀವಪರ ಭಾವನೆ ಹೊಂದುವಂತೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇವರು ಶ್ರಮವಹಿಸುವುದರಿಂದ ಶಿಕ್ಷಕ ಸಮಾಜ ನಿರ್ಮಾಣ ಮಾಡುವುದೊಂದಿಗೆ ದೇಶ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪರವಾಗಿ ಸಂಪನ್ಮೂಲ ಶಿಕ್ಷಕರಾದ ರವಿ ಕಂಗಳ ಅವರು ಆದರ್ಶ ಶಿಕ್ಷಕರಾಗುವುದು ಹೇಗೆ ? ಶಿಕ್ಷಕರ ಕಾರ್ಯವಿಧಾನಗಳ ಕುರಿತು ಮಾತನಾಡಿ, ಸ್ವಸ್ಥ, ಸುಸ್ಥಿರ, ಸಮಾಜ ನಿರ್ಮಾಣಕ್ಕಾಗಿ ಶಿಕ್ಷಕರು ಉತ್ತಮ ವ್ಯಕ್ತಿತ್ವ ಹೊಂದಿ ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಆದರ್ಶ ಬಿತ್ತನೆ ಮಾಡಬೇಕು. ಉಪನ್ಯಾಸಕರಾದ ಸಂಗಮೇಶ ಬ್ಯಾಳಿಯವರು ಶಿಕ್ಷಣದ ಮೂಲ ಪರಿಕಲ್ಪನೆ ಕುರಿತು ಮಾತನಾಡಿ, ಗುರುಕುಲ ಸಂಪ್ರದಾಯದ ಶಿಕ್ಷಣ ಪ್ರಸ್ತುತ ಶಿಕ್ಷಣ ಅವಲೋಕಿಸಿ ಸಾಧಕ ಬಾಧಕಗಳ ಕುರಿತು ಪ್ರಶಿಕ್ಷಣಾರ್ಥಿಗಳೊಂದಿಗೆ ಚರ್ಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಚ್.ಎಸ್. ಘಂಟಿ ವಹಿಸಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಸುಮಂಗಲಾ ಪೂಜಾರಿ ಹಾಗೂ ಶಿಲ್ಪಾ ಖಂಡಿ ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಉಪನ್ಯಾಸಕರಾದ ಸರಿತಾ ಚಂದನ್ನವರ, ಬಿ.ಎ. ನದಾಫ್, ಇಂದುಮತಿ ಬೋರಣ್ಣವರ ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಗದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.