ಕಮಿಷನ್ ಆರೋಪ: ತಂಗಡಗಿ ರಾಜೀನಾಮೆಗೆ ಬಿಜೆಪಿ ಪಟ್ಟು

KannadaprabhaNewsNetwork |  
Published : Jul 09, 2025, 12:28 AM IST
5445 | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಲಂಚ ಕೊಟ್ಟರೆ ಮಾತ್ರ ಮಠ, ವ್ಯಕ್ತಿ, ಮಂದಿರಕ್ಕೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ನೋಡಿದರೆ ಸರ್ಕಾರದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ಕೊಪ್ಪಳ:

ನೆಲಮಂಗಲದ ಶ್ರೀತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಮಂಜೂರಿಯಾಗಿದ್ದ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳಿರುವ ಸಚಿವ ಶಿವರಾಜ ತಂಗಡಗಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸಚಿವ ಶಿವರಾಜ ತಂಗಡಗಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಈ ಹಿಂದಿನ ಸರ್ಕಾರವೇ ಮಠಕ್ಕೆ ₹ 3.5 ಕೋಟಿ ಅನುದಾನ ಮಂಜೂರಿ ಮಾಡಿತ್ತು. ಈಗಾಗಲೇ ಮಠದಲ್ಲಿ ₹2.5 ಕೋಟಿ ವೆಚ್ಚದ ಕಾಮಗಾರಿ ಮಾಡಿದ್ದು, ಹಿಂದಿನ ಸರ್ಕಾರ ₹ 1 ಕೋಟಿ ನೀಡಿತ್ತು. ಉಳಿದ ₹ 1.5 ಕೋಟಿಯನ್ನು ಸಚಿವರು ನೀಡಲಿಲ್ಲ. ಬಳಿಕ ನ್ಯಾಯಾಲಯ ಹಣ ನೀಡುವಂತೆ ಆದೇಶಿಸಿತ್ತು. ಅದರೆ, ಸಚಿವರು ಈ ಅನುದಾನ ಬಿಡುಗಡೆ ಶೇ. 20ರಿಂದ 25ರಷ್ಟು ಕಮಿಷನ್ ಕೇಳಿರುವುದು ಖಂಡನೀಯ ಮತ್ತು ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ಲಂಚಕೊಟ್ಟರೆ ಮಾತ್ರ ಮಠ, ವ್ಯಕ್ತಿ, ಮಂದಿರಕ್ಕೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ನೋಡಿದರೆ ಸರ್ಕಾರದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ ಎಂದು ದೂರಿದ ನಾಯಕರು, ಹಿಂದುಳಿದ ವರ್ಗಗಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸಂಘ-ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕಾದ ಹಣಕ್ಕೂ ಕಪ್ಪ ಪಡೆಯುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಎಂಥ ದುಸ್ಥಿತಿಗೆ ಬಂದಿದೆ ಎಂಬುದು ತಿಳಿಯುತ್ತದೆ ಎಂದರು.

ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಪ್ಪ ಪಡೆಯುತ್ತಿರುವ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಶಾಸಕ ಗಾಲಿ ಜನನಾರ್ದ ರೆಡ್ಡಿ, ಮುಖಂಡರಾದ ಶರಣು ತಳ್ಳಿಕೇರಿ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಸಂಜೀವರಡ್ಡಿ ಇದ್ದರು.

PREV