ಎಸ್ಸಿ, ಎಸ್ಟಿ ಜನರ ಮೇಲೆ ಪ್ರತಿದೂರು ಕಳವಳಕಾರಿ

KannadaprabhaNewsNetwork |  
Published : Jun 17, 2026, 01:15 AM IST
1 | Kannada Prabha

ಸಾರಾಂಶ

ಚ್.ಡಿ. ಕೋಟೆ ಪುರಸಭೆ ಅಧಿಕಾರಿಗಳು ಸ್ಥಳೀಯ ಮುಖಂಡರೊಂದಿಗೆ ಸೇರಿ ತಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮಧು ಎಂಬ ಮಹಿಳೆ ಅವಲತ್ತುಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರು

ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲೆ ಕೌಂಟರ್ ದೂರು ದಾಖಲಾಗುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್. ಮೂರ್ತಿ ಕಳವಳ ವ್ಯಕ್ತಪಡಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆಗಳ ಸಭೆಯಲ್ಲಿ ಪ್ರತಿ ದೂರು ದಾಖಲಿಸಿ ದೌರ್ಜನ್ಯಕ್ಕೆ ಒಳಗಾದವರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಅನೇಕ ಮನವಿ ಸ್ವೀಕರಿಸಿದ ಅವರು, ಕೌಂಟರ್ ದೂರು ದಾಖಲು ಮಾಡುವುದು ರಾಜ್ಯವ್ಯಾಪಿ ಹೆಚ್ಚುತ್ತಿದೆ. ಪೊಲೀಸರು ಉದ್ದೇಶಪೂರ್ವಕವಾಗಿ ಪ್ರತಿ ದೂರು ದಾಖಲು ಮಾಡಿದ್ದರೆ. ಈ ಸಂಬಂಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಹಲವು ದೂರು

ಎಚ್.ಡಿ. ಕೋಟೆ ಪುರಸಭೆ ಅಧಿಕಾರಿಗಳು ಸ್ಥಳೀಯ ಮುಖಂಡರೊಂದಿಗೆ ಸೇರಿ ತಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮಧು ಎಂಬ ಮಹಿಳೆ ಅವಲತ್ತುಕೊಂಡರು. ನಮ್ಮ ಜಾಗಕ್ಕೆ ಬೇರೆಯವರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದರೆ ಜಾಗ ಖಾಲಿ ಮಾಡುವಂತೆ ದಬಾಯಿಸುತ್ತಿದ್ದಾರೆ. ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದರು.

ನಮ್ಮ ಜಾಗದ ಮೇಲೆ ಅಕ್ರಮ ಪ್ರವೇಶ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದವನ ವಿರುದ್ಧ ದೂರು ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಕಷ್ಟ ಕೇಳದಿದ್ದ ಮೇಲೆ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಬೇಕು ಎಂದು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಮಹದೇವಮ್ಮ ಆಯೋಗದ ಅಧ್ಯಕ್ಷರನ್ನು ಒತ್ತಾಯಿಸಿದರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಜಿಲ್ಲಾಡಳಿತವೇ ದಲಿತರ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ. ಎಸ್ಸಿ, ಎಸ್ಟಿ ಜನಗಳ ಕುಂದುಕೊರತೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೆ ಎಸ್ಸಿ, ಎಸ್ಟಿ ಆಯೋಗ ಸಭೆ ನಡೆಸುತ್ತದೆಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಂಜೂರಾದರೂ ಬ್ಯಾಂಕ್‌ ಗಳಿಂದ ಸಕಾಲದಲ್ಲಿ ಸಾಲ ದೊರೆಯುತ್ತಿಲ್ಲ ಎಂದು ದೂರಿದರು.

ಕೆ.ಆರ್. ನಗರ ತಾಲೂಕಿನಲ್ಲಿ ವಿವಿಧೆಡೆ ವಾಸವಿರುವ ಅಲೆಮಾರಿ ಜನರಿಗೆ ನಿವೇಶನ, ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ದಸಂಸ ಮುಖಂಡ ದಿವಾಕರ್ ಮನವಿ ಸಲ್ಲಿಸಿದರು.

ಒಳ ಮೀಸಲಾತಿ ಅನುಷ್ಠಾನಕ್ಕೆ ತರಬೇಕು ಮತ್ತು ಬೋವಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಬೇಕು ಎಂದು ರಾಜಣ್ಣ ಆಯೋಗವನ್ನು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಟಿ. ನರಸೀಪುರದಲ್ಲಿ ಅಲೆಮಾರಿ ಜನಾಂಗವನ್ನು ಒಕ್ಕಲೆಬ್ಬಿಸಿ ಬೀದಿಗೆ ತರಲಾಗಿದೆ. ಈಗ ಆಲಗೂಡು ಗ್ರಾಮದಲ್ಲಿ ನೀಡಲಾಗಿರುವ ಜಾಗಕ್ಕೆ ಮೂಲಸೌಕರ್ಯ ಕಲ್ಪಿಸಬೇಕು. ತಲಕಾಡು ಹೋಬಳಿಯ ದೊಡ್ಡಪುರ ಗ್ರಾಮದಲ್ಲಿನ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದ್ದು ತಡೆಯಬೇಕು ಎಂದು ಒತ್ತಾಯಿಸಿದರು.

ಅರಣ್ಯ ಪ್ರದೇಶಗಳ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಹೋರಾಟಗಾರರು ಕೋರಿದರು. ಮೈಸೂರಿನ ಜಯನಗರ ಮಳಲವಾಡಿ ಗ್ರಾಮದಲ್ಲಿ ಹೂಳಲು ಜಾಗ ಕೊಡುವಂತೆ ವ್ಯಕ್ತಿಯೊಬ್ಬರು ಮನವಿ ಮಾಡಿದರು. 100 ಹೆಚ್ಚು ಅರ್ಜಿಗಳು ಸ್ವೀಕೃತವಾದವು.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಎಸ್ಸಿ ಎಸ್ಟಿ ಆಯೋಗದ ಸದಸ್ಯರಾದ ದಿವಾಕರ್, ಗೀತಾ ತಾಮೋಷಿ, ಎಂ. ತುಂಬಯ್ಯ, ಕಾರ್ಯದರ್ಶಿ ಎಚ್.ಎನ್. ಶಿವರಾಮ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಡಿಸಿಪಿ ಡಾ. ಹರ್ಷಾ ಪ್ರಿಯಂವದಾ, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಮೊದಲಾದವರು ಇದ್ದರು.

-----

ಬಾಕ್ಸ್...

ಸಂಶೋಧಕರಿಗೆ ಶಿಷ್ಯ ವೇತನ ಕೊಡಿಸಿ

ಮೈಸೂರು ವಿವಿ ಸಂಶೋಧನ ವಿದ್ಯಾರ್ಥಿಗಳಿಗೆ ಒಂದು ವರ್ಷದಿಂದ ಶಿಷ್ಯ ವೇತನ ಮಂಜೂರು ಮಾಡಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಖರ್ಚು ಮಾಡುತ್ತಿದ್ದಾರೆ. ಎಲ್ಲದಕ್ಕೂ ದುಡ್ಡಿಲ್ಲ ಎಂದು ಕುಲಪತಿ ಉತ್ತರ ಕೊಡುತ್ತಿದ್ದಾರೆ. ಪೊಲೀಸರು ಪ್ರತಿಭಟನೆ ಮಾಡುವವರನ್ನು ತಡೆಯುತ್ತಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಆಯೋಗಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಎಲ್. ಮೂರ್ತಿ ಅವರು, ತುರ್ತು ಕ್ರಮ ವಹಿಸುವ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ
ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ