ಮೂಡುಬಿದಿರೆ: ಶ್ರೀ ಶಾರದಾ ನಾಟ್ಯಾಲಯ, ಮೂಡುಬಿದಿರೆ ಕಲಾತಂಡದ ವತಿಯಿಂದ ಆಟಿಡೊಂಜಿ ದಿನವನ್ನು ಭಾನುವಾರ ಮೂಡುಬಿದಿರೆಯ ಸ್ವರ್ಣಮಂದಿರದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಸಲಾಯಿತು.

ಬೆಳಕು ಸೇವಾ ಫೌಂಡೇಶನ್, ಮೈಸೂರು ವತಿಯಿಂದ ಪ್ರದಾನವಾಗುವ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026 ಪುರಸ್ಕೃತರಾದ ನಾಟ್ಯಾಲಯದ ನಿರ್ದೇಶಕ ಮೋಹನ್ ಹೊಸ್ಮಾರ್ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಶಂಕರ್ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಪ್ರೇಮಾ ಮುಲ್ಕಿ ಭಾಗವಹಿಸಿದ್ದರು. ಅತಿಥಿಗಳಾಗಿ ಚಿತ್ರಕಲಾ ಶಿಕ್ಷಕಿ ಸ್ವಾತಿ ಕುಲಾಲ್, ಜೈನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಂಧ್ಯಾ, ನಾಟ್ಯಾಲಯದ ಉಪಾಧ್ಯಕ್ಷ ಧರ್ಮರಾಜ್ ಶೆಟ್ಟಿ ಹಾಗೂ ಕೋಶಾಧಿಕಾರಿ ಸತೀಶ್ ಉಪಸ್ಥಿತರಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸತೀಶ್ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಎಲೆ ಗುರುತಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಪೋಷಕರು ಹಾಗೂ ವಿದ್ಯಾರ್ಥಿಗಳು ಆಷಾಝ ಮಾಸದ ವಿಶೇಷತೆಯನ್ನು ಪ್ರತಿಬಿಂಬಿಸುವ 35 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಮನೆಯಿಂದಲೇ ತಯಾರಿಸಿ ತಂದು ಪ್ರದರ್ಶಿಸಿದರು. ಇದರ ಮೂಲಕ ಆಟಿಡೊಂಜಿ ದಿನದ ಸಂಪ್ರದಾಯ, ಸಂಸ್ಕೃತಿ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸಲಾಯಿತು. ಮೋಹನ್ ಹೊಸ್ಮಾರ್ ವಂದಿಸಿದರು. ಧನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.