ಕನ್ನಡಪ್ರಭ ವಾರ್ತೆ ಹಾಸನ
ನಗರದ ಆಕಾಶವಾಣಿ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ಸಮೀಪ ಇರುವ ಹಾಸ್ಟಲ್‌ಗೆ ಶನಿವಾರ ರಾತ್ರಿ ಇಲಾಖೆಯ ಮುಖ್ಯ ಆಯುಕ್ತರಾದ ಕೆ. ಶ್ರೀನಿವಾಸ್ ಹಾಗೂ ತಂಡ ದಿಢೀರ್ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕಗೊಂಡರು. ಕೊಠಡಿ, ಊಟದ ಕೊಠಡಿ, ಮಲಗುವ ಕೊಠಡಿ ಹಾಗೂ ಶೌಚಾಲಯ ಇತರೆ ಕಡೆ ಖುದ್ದಾಗಿ ಹೋಗಿ ಪರಿಶೀಲಿಸಿದರು. ವೈದ್ಯಕೀಯ, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ವೆಟರ್ನರಿ, ಮೆಕಾನಿಕಲ್ ಶಿಕ್ಷಣ ಪಡೆಯುತ್ತಿರುವವರು ಇಲ್ಲಿದ್ದೀರಾ! ಓದುವುದಕ್ಕೆ ಬಂದಿದ್ದೀರಾ ಇಲ್ಲ ಮಜಾ ಮಾಡುವುದಕ್ಕೆ ಬಂದಿದ್ದೀರಾ. ಓದುವ ವೇಳೆ ಇವೆಲ್ಲಾ ಬೇಕಾ! ನಿಮ್ಮ ಅಪ್ಪ, ಅಮ್ಮ ಇದಕ್ಕೆ ಓದಲು ಕಳುಹಿಸಿದ್ದಾರೆ. ತಂದೆ, ತಾಯಿ ಕಷ್ಟಪಟ್ಟು ಓದಿಸುತ್ತಾರೆ. ಅವರ ಹೆಸರು ಉಳಿಸಬೇಕು ಎಂದು ವಿದ್ಯಾರ್ಥಿಗೆ ತರಾಟೆಗೆ ತೆಗೆದುಕೊಂಡರು.
ಈ ಹಾಸ್ಟೆಲ್‌ನ ಅಡುಗೆ ಮಾಡುವವರು ಬೆಳಿಗ್ಗೆ ಇರುವವರು ಸಂಜೆ ಇರುವುದಿಲ್ಲ. ಬೇರೆಯವರು ಬಂದು ಅಡುಗೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ಒಬ್ಬರಿಗೆ ಅರ್ಧ ಸಂಬಳ ಕೊಡುತ್ತಾರಾ ಎಂದು ಆಯುಕ್ತರು ಇಲಾಖೆ ಅಧಿಕಾರಿ ಕುಮಾರ್ ಹಾಗೂ ಇತರರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಲಾಖೆ ಅಧಿಕಾರಿ, ಈ ಹಾಸ್ಟೆಲ್‌ನಲ್ಲಿ ೧೬೫ ವಿದ್ಯಾರ್ಥಿಗಳು ಇದ್ದು, ಚಿಕನ್ ಎಷ್ಟು ಕೇಜಿ ತರುತ್ತಾರೆ, ಬಬ್ಬರಿಗೆ ಎಷ್ಟು ಚಿಕನ್ ಕೊಡುತ್ತೀರಾ ಎಂದು ಅಡುಗೆ ಮಾಡುವ ಮಹಿಳೆಯರಿಗೆ ಪ್ರಶ್ನೆ ಮಾಡಿದರು. ಆಗ ತಡವರಿಸುತ್ತಾ ೨೦ ಕೆ.ಜಿ ಎಂದು ಹೇಳಿದರು. ಆಯುಕ್ತರು ಮಾತನಾಡಿ, ಅವರೇ ವಾಸಿ ೧೫ ಕೆಜಿ ಎಂದಿದ್ದಾರೆ. ಚಿಕನ್ ತಂದ ಮೇಲೆ ಹಾಸ್ಟೆಲ್‌ನಲ್ಲಿ ತೂಕ ಮಾಡಬೇಕು. ಇವೆಲ್ಲಾ ವ್ಯವಸ್ಥೆ ಇಲ್ಲವೇ ಎಂದು ಪ್ರಶ್ನಿಸಿದರು.ಇಷ್ಟು ಹುಡುಗರಿಗೆ ಎಷ್ಟು ಇಡ್ಲಿ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ೪೦೦ ಇಡ್ಲಿ ಎಂದರು. ಒಬ್ಬರಿಗೆ ೪ ಇಡ್ಲಿ ಹಾಕುತ್ತಾರೆ. ಹಾಗಾದ್ರೆ ೧೬೫ ಜನರಿಗೆ ೬೬೦ ಇಡ್ಲಿ ಬೇಕಾಗುತ್ತದೆ. ಇದರಲ್ಲಿ ಯಾರು ಸತ್ಯಹರಿಶ್ಚಂದ್ರ ಗೊತ್ತಾಗುತ್ತಿಲ್ಲ. ಇನ್ನು ೪೦೦ ಇಡ್ಲಿಗೆ ೧೫ ಕೆಜಿ ಅಕ್ಕಿ ಹಾಕುವುದಾಗಿ ಹೇಳಿದರು. ಈ ವೇಳೆ ಇಲ್ಲಿರುವವರು ಒಬ್ಬೊಬ್ಬರು ಗೊಂದಲದ ಹೇಳಿಕೆ ಕೊಟ್ಟಾಗ ತರಾಟೆಗೆ ತೆಗೆದುಕೊಂಡರು. ಇಲ್ಲಿರುವವರು ಎಲ್ಲರು ದೊಡ್ಡ ದೊಡ್ಡ ಶಿಕ್ಷಣ ಪಡೆಯುತ್ತಿದ್ದು, ಎಲ್ಲರೂ ಬುದ್ಧಿವಂತರೆ ಇದ್ದೀರಾ. ಇಷ್ಟೊಂದು ಜನರಿಗೆ ಈ ಹಾಸ್ಟೆಲ್‌ನಲ್ಲಿ ಏಕೆ ಸ್ಟೂಡೆಂಟ್ ಕಮಿಟಿ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಇಷ್ಟು ದಿನವಾದರೂ ಕಮಿಟಿ ಏಕೆ ಇಲ್ಲ. ಕಮಿಟಿ ಮಾಡಬಾರದು ಎಂದು ಹೇಳಿದ್ದರಾ, ತಾಲೂಕು ಅಧಿಕಾರಿ ಮತ್ತು ಇಲಾಖೆ ಜಿಲ್ಲಾ ಅಧಿಕಾರಿಗಳು ಮಾಡಿಲ್ಲ! ಸ್ಟೂಡೆಂಟ್ ಕಮಿಟಿ ಮೂಲಕವೇ ಅಡುಗೆ ಸಾಮಾನುಗಳನ್ನು ಕೊಡಿಸಬೇಕು ಎಂಬುವುದು ಇದೆ. ನಿಮ್ಮ ಪ್ರಕಾರ ೬೫೦ ಇಡ್ಲಿ ತಿನ್ನುತ್ತಿದ್ದೀರಾ, ಇಲ್ಲಿ ೪೦೦ ಇಡ್ಲಿ ಮಾಡುತ್ತಾರೆ. ಇಲ್ಲಿ ಒಂದಕ್ಕೊಂದು ತಾಳೆಯೆ ಆಗುತ್ತಿಲ್ಲ. ಇಲ್ಲಿ ನಡೆಯುವ ಗೋಲ್‌ಮಾಲ್ ಗೊತ್ತಾಗುತ್ತದೆ ಎಂದು ಕಮಿಟಿ ಮಾಡಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.