ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಕಲಾಭವನದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕಾಲೇಜು ಆವರಣ ಹಾಗೂ ಅಂಗಾಂಗ ದಾನದ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ 20 ರಿಂದ 30ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ತಂಬಾಕು ಜಗಿಯುವ ಪದ್ಧತಿ ಹೆಚ್ಚಾಗಿದ್ದು, ಇದು ಮುಂದಿನ ಪೀಳಿಗೆಗೂ ಮಾರಕವಾಗಿ ಪರಿಣಮಿಸುತ್ತಿದೆ. ಕಿದ್ವಾಯಿ ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ ಸುಮಾರು 80 ಸಾವಿರ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಇದರಲ್ಲಿ ಶೇ.25ರಷ್ಟು ಪ್ರಕರಣಗಳು ತಂಬಾಕು ಸೇವನೆಯಿಂದ ಉಂಟಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಇಂದಿನ ಯುವಜನತೆ ಇಂಟರನಟ್ ಮತ್ತು ಸೋಶಿಯಲ್ ಮೀಡಿಯಾಗಳ ಪ್ರಭಾವಕ್ಕೆ ಒಳಗಾಗಿ ದಾರಿ ತಪ್ಪುತ್ತಿದ್ದಾರೆ. ಅಲ್ಲದೆ, ಆಹಾರದಲ್ಲಿ ಉಪ್ಪಿನ ಅಂಶ ಹೆಚ್ಚಾಗುತ್ತಿರುವುದರಿಂದ ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಮತ್ತು ಕಿಡ್ನಿ ವೈಫಲ್ಯಗಳು ಸಂಭವಿಸುತ್ತಿವೆ. ಅದರಲ್ಲೂ ಮಹಿಳೆಯರಲ್ಲಿ ಹೃದ್ರೋಗ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ, ಮಾತನಾಡಿದ ಬೀಳಗಿ ಶಾಸಕ ಜೆ.ಟಿ. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಅಥವಾ ಸಮಾಜಕ್ಕೆ ದುಶ್ಚಟ ಮಾಡಬೇಡಿ ಎಂದು ಹೇಳುವ ನೈತಿಕ ಹಕ್ಕಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಬೇರೆಯವರಿಗೆ ಬುದ್ಧಿ ಹೇಳುವ ಮುನ್ನ ನಾವು ಅದನ್ನು ಪಾಲಿಸಬೇಕು. ನಾವೇ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಬೇರೆಯವರಿಗೆ ಬುದ್ಧಿ ಹೇಳಿದರೆ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರು ಉಪಸ್ಥಿತರಿದ್ದರು.