ಕನ್ನಡಪ್ರಭ ವಾರ್ತೆ ಸಿಂದಗಿ
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಾಗಿ ಈ ಭಾಗದ ರೈತರ, ಜನಪ್ರತಿನಿಧಿಗಳ ಸಭೆ ಕರೆದು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಮುಳುಗಡೆ ಪ್ರದೇಶದ ರೈತರಿಗೆ ನೀರಾವರಿ ಯೋಜನೆಗೆ ಅನುಗುಣವಾಗಿ ಒಣ ಬೇಸಾಯಕ್ಕೆ ಪ್ರತಿ ಎಕರೆಗೆ ₹30 ಲಕ್ಷ ಮತ್ತು ನೀರಾವರಿ ಪ್ರದೇಶಕ್ಕೆ ಪ್ರತಿ ಎಕರೆಗೆ ₹40 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ ಆಲಮಟ್ಟಿ ಅಣೆಕಟ್ಟು ಎತ್ತರಗೊಳಿಸಿ ಸುಮಾರು 18 ಲಕ್ಷ ಭೂಮಿಗೆ ನೀರಾವರಿ ಸೌಲಭ್ಯಕ್ಕೆ ನಿರ್ಣಯ ತಗೆದುಕೊಂಡಿರುವ ಕಾರ್ಯಕ್ಕೆ ಉತ್ತರ ಕರ್ನಾಟಕದ ರೈತರ ಪರವಾಗಿ ಸರ್ಕಾರಕ್ಕೆ ಅಭಿನಂದಿಸಿದ ಶಾಸಕರು, ಆದರೆ ಈ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸುವಂತೆ ಮನವಿ ಮಾಡಿದರು.
ವಿಜಯಪುರ ನಗರದಲ್ಲಿ ಸುಮಾರು 85-90 ದಿನಗಳ ಕಾಲ ಅನೇಕ ಸಂಘಟನೆಗಳು, ವಿದ್ಯಾರ್ಥಿಗಳು, ಪ್ರಜ್ಞಾವಂತರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟ ಮಾಡುತ್ತಿದ್ದಾರೆ. ಆದರೆ ವಿಜಯಪುರ ನಗರದಲ್ಲಿ ಪ್ರಸ್ತುತ 2 ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಆ ಕಾಲೇಜನ್ನು ಗ್ರಾಮೀಣ ಪ್ರದೇಶದ ಮಧ್ಯೆ ಸ್ಥಾಪಿಸಲು ಸರ್ಕಾರ ಚಿಂತಿಸಿದ್ದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹಾಗೂ ನಮ್ಮ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಆರೋಗ್ಯ ವಿಚಾರದಲ್ಲಿ ಗ್ರಾಮೀಣಮಟ್ಟದ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ನನ್ನ ಮತಕ್ಷೇತ್ರದಲ್ಲಿ ಒಟ್ಟು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸಬೇಕು, ಆದರೆ ಕೇವಲ 9 ಕೇಂದ್ರಗಳಿವೆ. ಇದರಿಂದ ಗ್ರಾಪಂ ಮಟ್ಟದಲ್ಲಿನ ಜನತೆಗೆ ಇದು ಅತ್ಯಂತ ತೊಂದರೆಯಾಗುತ್ತಿದೆ. ಸರ್ಕಾರ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚು ಆದ್ಯತೆ ನೀಡಬೇಕು. ಕಳೆದ ಬಾರಿ ಸುರಿದ ಬಾರಿ ಮಳೆಯಿಂದ ಭೀಮಾ ನದಿಯ ಪ್ರವಾಹಕ್ಕೆ ನನ್ನ ಕ್ಷೇತ್ರ ಸೇರಿದಂತೆ ಸುತ್ತಲಿನ 4 ತಾಲೂಕುಗಳ ರೈತರು ತತ್ತರಿಸಿ ಹೋಗಿದ್ದರು. ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ವೈಮಾನಿಕ ಸಮೀಕ್ಷೆ ನಡೆಸಿ ನನ್ನ ಕ್ಷೇತ್ರದ 47-50 ಸಾವಿರ ರೈತರು ತೊಂದರೆಗೀಡಾಗಿದ್ದು ಆ ರೈತ ಕುಟುಂಬಗಳಿಗೆ 1 ಲಕ್ಷ 101 ಕೋಟಿ ರು. ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಿದೆ ಎಂದ ಅವರು, ನನ್ನ ಕ್ಷೇತ್ರದ ಪರವಾಗಿ ಸರ್ಕಾರಕ್ಕೆ ಅಭಿನಂದಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ 7 ರಿಂದ 8 ಸಕ್ಕರೆ ಕಾರ್ಖಾನೆಗಳಿವೆ. ಸಿಂದಗಿ, ಇಂಡಿ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಗಾಗರು ಇರುವುದರಿಂದ ಹೊಲಗಳಿಗೆ ಹೊಗಲು ಸೂಕ್ತ ರಸ್ತೆಗಳಿಲ್ಲ. ಆದಷ್ಟು ಬೇಗನೆ ಆ ರೈತರಿಗೆ ಸೂಕ್ತ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಅಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿಕೊಂಡರು. ವಿಜಯಪುರ ನಗರದಲ್ಲಿನ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜನ ವಿವಿಧ ಕ್ಷೇತ್ರಗಳ ಬೇಡಿಕೆಗೆ ಸದನದ ಹೊರಗೆ ಹೋರಾಟ ಮಾಡುತ್ತಲೆ ಇದ್ದಾರೆ ಅವರಿಗೆ ಸರ್ಕಾರ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಬೇಕು. ವಿರೋಧ ಪಕ್ಷದ ಶಾಸಕರುಗಳು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರುವ ಪಾಲು ಪಡೆದುಕೊಳ್ಳುವಲ್ಲಿ ಆಡಳಿತ ಪಕ್ಷದವರೊಂದಿಗೆ ಕರ್ನಾಟಕದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ಅಶೋಕ ಮನಗೂಳಿ ಮನವಿ ಮಾಡಿದರು.