- ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕೇಂದ್ರ ಉದ್ಘಾಟನೆ । ಪ್ರತಿವರ್ಷ 300 ಜನರ ಆಯ್ಕೆಗೆ ನಿರ್ಧಾರ
ಕನ್ನಡಪ್ರಭ ವಾರ್ತೆ ದಾವಣಗರೆ
ಐಎಎಸ್, ಕೆಎಎಸ್, ಬ್ಯಾಂಕಿಂಗ್, ರೈಲ್ವೆ, ಪಿಎಸ್ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ದಾವಣಗೆರೆಯಲ್ಲೇ ಆರಂಭಿಸಿರುವ ಸಂಕಲ್ಪ ಕೇಂದ್ರದಲ್ಲಿ ಉಚಿತ ತರಬೇತಿ, ಮಾರ್ಗದರ್ಶನ ನೀಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆರಂಭಿಸಲಾದ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷ 300 ಜನರನ್ನು ಸಂಕಲ್ಪ ಕೇಂದ್ರದಲ್ಲಿ ತರಬೇತಿಗೆ ಆಯ್ಕೆ ಮಾಡಿ, ಅಖಿಲ ಭಾರತಮಟ್ಟ ಮತ್ತು ರಾಜ್ಯಮಟ್ಟದ ನಾಗರೀಕ ಸೇವಾ ಹಾಗೂ ಬ್ಯಾಂಕ್ ಇತರೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಐಎಎಸ್ ಬಾಬಾ ಕೋಚಿಂಗ್ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಸಜ್ಜಿತ ಕೋಚಿಂಗ್ ಕೇಂದ್ರ, ಐಟಿ, ಬಿಟಿ ವಲಯಗಳ ಸ್ಥಾಪನೆಯೊಂದಿಗೆ ಸ್ಥಳೀಯ ಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಬೇಕೆಂಬ ಆಕಾಂಕ್ಷೆಯೊಂದಿಗೆ 2023ರಲ್ಲಿ ಯುವಕರ ಜೊತೆ ಚರ್ಚಿಸಿದಾಗ ಅನೇಕರು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಅಗತ್ಯದ ಬಗ್ಗೆ ಮನವಿ ಮಾಡಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಸ್.ಎಸ್. ಕೇರ್ ಟ್ರಸ್ಟ್ ಈ ಬಗ್ಗೆ ಆಲೋಚಿಸಿತು. ‘ಕೌಶಲ್ಯ’, ‘ಸಕ್ಷಮ’ ಎಂಬ ಕಾರ್ಯಕ್ರಮ ಕೂಡ ಮಾಡಿದೆವು. ಸಿಇಟಿ, ನೀಟ್ ಪರೀಕ್ಷೆ ತರಬೇತಿ ಕೂಡ ನೀಡಿದೆವು. ಹಲವು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಯಿತು ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಗ್ರಂಥಾಲಯದಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಓದುವುದನ್ನು ನೋಡಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಒಲವು ಮೂಡಿತು. ಆಗ ಪರಿಶೀಲಿಸಿದಾಗ ಲಲಿತಕಲಾ ಕಾಲೇಜು ಆವರಣದಲ್ಲಿ ಸ್ಥಳಾವಕಾಶ ಲಭ್ಯವಾಯಿತು. ಹೈಸ್ಕೂಲ್ ಮೈದಾನದಲ್ಲಿದ್ದ ಬಸ್ ನಿಲ್ದಾಣ ತೆರವು ಮಾಡಿದ ವಸ್ತುಗಳನ್ನು ಬಳಸಿ, ಈ ಕಟ್ಟಡ ನಿರ್ಮಿಸಿದ್ದೇವೆ. ಡಿಎಂಎಫ್ ನಿಧಿಯಲ್ಲಿ ₹80 ಲಕ್ಷಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ ಎಂದರು.
ಐಎಎಸ್ ಬಾಬಾ ಕೋಚಿಂಗ್ ಸಂಸ್ಥೆಯ ಮೋಹನ್ ಮಾತನಾಡಿ, ಕೇಂದ್ರದಲ್ಲಿ 300 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಎಲ್ಲ ವಿದ್ಯಾರ್ಥಿಗಳನ್ನು ಸಂಕಲ್ಪ ಕೇಂದ್ರದಲ್ಲಿ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲಾಗುವುದು ಎಂದರು.
ಇದೇ ವೇಳೆ ಹೈಮಾಸ್ಟ್ ದೀಪ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ವೀರೇಶ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.
(ಕೋಟ್) ಐಟಿ ಕಂಪನಿಗಳನ್ನು ದಾವಣಗೆರೆ ಕರೆ ತರಲು ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಜಾಗದ ಪರಿಶೀಲನೆಯೂ ಮಾಡುತ್ತಿದ್ದೇವೆ. ಐಟಿಗೆ ಪೂರಕವಾದ ಸಮ್ಮೇಳನ ನಡೆಯಲು ಪ್ರಯತ್ನ ಮಾಡಿದ್ದೇವೆ.
- - -
-18ಕೆಡಿವಿಜಿ3, 4.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ, ಪೋಸ್ಟರ್ ಬಿಡುಗಡೆ ಮಾಡಿದರು. ಡಿಸಿ ಗಂಗಾಧರ ಸ್ವಾಮಿ, ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಇತರರು ಇದ್ದರು.