ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕರ್ನಾಟಕವನ್ನು ಮದ್ಯಪಾನ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ ಹೇಳಿದರು.ನಗರದ ಎಬಿಎಂ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ದುಶ್ಚಟಮುಕ್ತವಾಗಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಗಣ್ಯರ ಸಹಭಾಗತ್ವದಲ್ಲಿ ರಾಜ್ಯಮಟ್ಟದ ಜನ ಜಾಗೃತಿ ವೇದಿಕೆ ಸ್ಥಾಪಿಸಿ ಗಣ್ಯರ ಸಹಭಾಗಿತ್ವದಲ್ಲಿ ದುಶ್ಚಟಗಳ ಅನಾಹುತಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಪ್ರತಿವರ್ಷ ಗಾಂಧಿ ಜಯಂತಿ ಅಂಗವಾಗಿ ಮದ್ಯ ವಿರೋಧಿ ಜಾಥಾ, ಜನಜಾಗೃತಿ ಸಮಾವೇಶ ಏರ್ಪಡಿಸಲಾಗುತ್ತಿದೆ. ಇದುವರೆಗೆ 1985ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿದ್ದು, ಇದರಲ್ಲಿ 1.3 ಲಕ್ಷ ಶಿಬಿರಾರ್ಥಿಗಳು ಮದ್ಯ ವರ್ಜಿಸಿದ್ದಾರೆ. ಜಿಲ್ಲೆಯಲ್ಲಿ 719 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಾಗೂ ದುಶ್ಚಟ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ 50 ಗ್ರಾಮಗಳನ್ನು ಪಾನಮುಕ್ತ ಗ್ರಾಮವನ್ನಾಗಿ ಮಾಡಿದ್ದು, ಮದ್ಯಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಕ್ರಮ ವಹಿಸಬೇಕು. ಶಾಲಾ ಕಾಲೇಜುಗಳ ಬಳಿ ಕಡ್ಡಾಯವಾಗಿ ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದರು.
ಪವಾಡ ಭಂಜಕ ಹುಲಿಕಲ್ ನಟರಾಜ್ ಮಾತನಾಡಿ, ಕುಡಿತದಿಂದ ಒತ್ತಡ, ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಮನೆ ಮಠ ಕಳೆದುಕೊಳ್ಳುತ್ತಿದ್ದಾರೆ. ಶಿಬಿರದಿಂದ ಪ್ರಯೋಜನ ಪಡೆದುಕೊಂಡ ಸಾವಿರಾರು ಜನ ಉತ್ತಮ ಜೀವನ ನಡೆಸುತ್ತಿದ್ದಾರೆ. ಕುಡಿತ ಬಿಟ್ಟು ಹೊಸ ಜೀವನ ರೂಪಿಸುಕೊಂಡವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ನಾಗೇಶ್ ಮಾತನಾಡಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾವನ್ನು ನಗರದ ನೆಲದಾಂಜನೇಯ ದೇಗುಲದಿಂದ ಸಮಾರಂಭದ ವೇದಿಕೆವರೆಗೂ ಬೃಹತ್ ಜಾಥ ಮಾಡಲಾಗಿದೆ ಎಂದರು.
ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಟಿ.ಜಿ.ಮಂಜುನಾಥ್, ರವಿ, ತಾಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ಲೋಹಿತ್, ಗಿರೀಶ್ ಇದ್ದರು.12ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಜನಜಾಗೃತಿ ವೇದಿಕೆಯಿಂದ ದುಶ್ಚಟ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ ನಡೆಯಿತು.