ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕನ್ನಡ ಅಸ್ಮಿತೆಯ ನೆಲವಾದ ದೊಡ್ಡಬಳ್ಳಾಪುರದ ಬಗ್ಗೆ ವಿಶೇಷವಾದ ಗೌರವವಿದೆ. ಇಲ್ಲಿಗೆ ಹಲವು ಬಾರಿ ಬಂದಿದ್ದೇನೆ. ಮತ್ತೆ ಮತ್ತೆ ಬರಲು ಬಯಸುತ್ತೇನೆ ಎಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಹೇಳಿದರು.ಇಲ್ಲಿನ ತಾಲೂಕು ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಭಾನುವಾರ ದೊಡ್ಡಬಳ್ಳಾಪುರ ನಗರಸಭಾ ಅನುದಾನದಲ್ಲಿ ನವೀಕರಿಸಲಾದ ಡಾ.ರಾಜ್‌ಕುಮಾರ್ ಕಂಚಿನ ಪ್ರತಿಮೆ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಡಾ.ರಾಜ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಎಲ್ಲ ಭೇದ, ಭಾವಗಳನ್ನು ಮರೆತು ಒಟ್ಟುಗೂಡುವುದು ಈ ಊರಿನ ವಿಶೇಷ ಎಂದ ಅವರು, ಹಲವು ನಟರ ಅಭಿಮಾನಿಗಳು ಕನ್ನಡದ ಕೆಲಸದಲ್ಲಿ ಒಗ್ಗೂಡಿ ಕೆಲಸ ಮಾಡುವುದು ಅತ್ಯಂತ ಹೆಮ್ಮೆಯ ವಿಷಯ. ಅಪ್ಪಾಜಿ ಕೂಡ ದೊಡ್ಡಬಳ್ಳಾಪುರದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಇಲ್ಲಿನ ಕೆಸಿಎನ್ ಗೌಡರು ನಮ್ಮ ಕುಟುಂಬದ ಅನ್ನದಾತರು. ಇದನ್ನು ಮರೆಯುವಂತಿಲ್ಲ ಎಂದರು.ಕೆಸಿಎನ್ ಮೂವೀಸ್‌ನವರು ಬಂಗಾರದ ಪಂಜರ ಚಿತ್ರ ಮಾಡುವಾಗ ದೊಡ್ಡಬಳ್ಳಾಪುರದ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿತ್ತು. ನಾನು ಒಂದು ಸಣ್ಣ ಪಾತ್ರವನ್ನು ಬಾಲನಟನಾಗಿ ಮಾಡಬೇಕಿತ್ತು. ಆದರೆ ಆ ಅವಕಾಶ ಅಂದು ಕೈತಪ್ಪಿತ್ತು. ಈ ವಿಚಾರವನ್ನು ಈವರೆಗೆ ನಾನು ಎಲ್ಲೂ ಹೇಳಿಕೊಂಡಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ದೊಡ್ಡಬಳ್ಳಾಪುರದ ಅನನ್ಯತೆಯ ಬಗ್ಗೆ ಅಭಿಮಾನ ಹೊಂದಿರುವ ದೊಡ್ಮನೆ ಕುಟುಂಬದ ಕನ್ನಡ ಸೇವೆ ವಿಶೇಷವಾದದ್ದು. ಇಂದಿಗೂ ಡಾ.ರಾಜ್‌ಕುಮಾರ್ ಕನ್ನಡಿಗರ ಸ್ಫೂರ್ತಿಯಾಗಿದ್ದಾರೆ ಎಂದರು.ಇದೇ ವೇಳೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಬಾಗಿನ ಸಮರ್ಪಣೆ ಮಾಡಲಾಯಿತು. ಶಿವರಾಜ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ, ಕನ್ನಡ ಪಕ್ಷದ ಮುಖಂಡ ಡಿ.ಪಿ.ಆಂಜನೇಯ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಎನ್.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಕಾರ್ತಿಕೇಶ್ವರ್, ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಎನ್.ಪ್ರಸಾದ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಟಿ.ನಾರಾಯಣ್, ಕನ್ನಡ ಪಕ್ಷದ ಸಂಜೀವನಾಯಕ್, ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್, ತಾ.ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿಯ ಗೌರವಾಧ್ಯಕ್ಷ ಆನಂದ್‌ಕುಮಾರ್, ಅಧ್ಯಕ್ಷ ಜೆ.ಆರ್.ರಮೇಶ್, ಪ್ರಧಾನ ಕಾರ್ಯದರ್ಶಿ ಗುರುರಾಜ್, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮು, ಸಂಚಾಲಕ ಸಂಜೀವ, ನಿರ್ದೇಶಕ ರಂಗಸ್ವಾಮಿ, ಮಂಜುನಾಥ್, ರಾಘವೇಂದ್ರ ಮತ್ತಿತರರು ಹಾಜರಿದ್ದರು.ಅಭಿಮಾನಿಗಳನ್ನು ರಂಜಿಸಿದ ಶಿವಣ್ಣ ಹಾಡು, ಡೈಲಾಗ್!
ದೊಡ್ಡಬಳ್ಳಾಪುರ ನಂದು ಇಲ್ಲಿಗೆ ಯಾರೇ ಬರಲಿ..... ಎಂದು ಡೈಲಾಗ್ ಹೊಡೆದ ಶಿವಣ್ಣ, ಈ ಊರು ನನಗೆ ಹೊಸದೇನಲ್ಲ. ಮನಮೆಚ್ಚಿದ ಹುಡುಗಿ, ತವರಿಗೆ ಬಾ ತಂಗಿ, ವಾಲ್ಮೀಕಿ ಸಿನಿಮಾಗಳು ಸೇರಿದಂತೆ ಹಲವು ಸಂದರ್ಭಗಳಲ್ಲಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದರು. ಅಭಿಮಾನಿಗಳ ಅಪೇಕ್ಷೆಯಂತೆ ಮುತ್ತಣ್ಣ ಪೀಪಿ ಊದೂವ.. ಮತ್ತು ಆಕಾಶವೆ ಬೀಳಲಿ ಮೇಲೆ ನಾನೆಂದು ನಿಮ್ಮವನೆ... ಗೊಂಬೆ ಹೇಳುತೈತೆ ಸೇರಿದಂತೆ ವಿವಿಧ ಸಿನಿಮಾದ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.ಪುಟಾಣಿ ಅಭಿಮಾನಿಯನ್ನು ವೇದಿಕೆಗೆ ಕರೆದು ಡೈಲಾಗ್ ಹೇಳಲು ಅವಕಾಶ ಕೊಟ್ಟ ಶಿವಣ್ಣ ನಡೆ ಮೆಚ್ಚುಗೆಗೆ ಪಾತ್ರವಾಯಿತು. ಶಿವಣ್ಣ ಹಾಡಿಗೆ ಅಭಿಮಾನಿಗಳಿಂದ ಶಿಣ್ಣೆ, ಚಪ್ಪಾಳೆ ಹೊಡೆದರು. ಹಾಡು ಹಾಡುತ್ತಾ ಒಂದೆರೆಡು ಸ್ಟೆಪ್ಸ್ ಹಾಕಿದ ಭಜರಂಗಿಯ ನಡೆಗೆ ಅಭಿಮಾನಿಗಳು ಹೆಚ್ಚೆದ್ದು ಕುಣಿದರು.