ನರಗುಂದ: ಯಾವ ಹೆಣ್ಣಿಗೂ ಕುಡುಕ ಗಂಡ ಬೇಕಾಗಿಲ್ಲ. ಯಾವ ಮಗುವಿಗೂ ಕುಡುಕ ಅಪ್ಪ ಬೇಕಾಗಿಲ್ಲ. ದೇವರಿಗೂ ಕುಡುಕ ಭಕ್ತ ಬೇಕಾಗಿಲ್ಲ. ಸಮಾಜಕ್ಕೂ ಕುಡುಕ ವ್ಯಕ್ತಿ ಬೇಕಾಗಿಲ್ಲ ಎಂದು ಕೊಪ್ಪಳ ಜನಜಾಗೃತಿ ಯೋಜನಾಧಿಕಾರಿ ನಾಗೇಶ ವೈ.ಎ. ತಿಳಿಸಿದರು.ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ 2059ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಡಿತದಿಂದ ಸತ್ತ ವ್ಯಕ್ತಿಯ ಕುಟುಂಬವು ಕತ್ತಲಲ್ಲಿ ಮುಳಗಬಾರದು. ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಶಿಬಿರವನ್ನು ಮಾಡುತ್ತಿದ್ದೇವೆ ಎಂದರು. ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಕುಡಿತಕ್ಕೆ ದಾಸರಾದ ವ್ಯಕ್ತಿಗಳು ಮನೆಯ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಸಮಾಜದಲ್ಲಿ ಗೌರವ ಸಿಗಲ್ಲ. ಆದ್ದರಿಂದ ಸಂಜೀವಿನಿಯಂತೆ ಇರುವ ಮದ್ಯವರ್ಜನ ಶಿಬಿರದ ಸದುಪಯೋಗ ಪಡೆದುಕೊಂಡು ಜೀವನವನ್ನು ಬದಲಾಯಿಸಿಕೊಳ್ಳಿ ಎಂದರು.ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಸರ್ವತೋಮುಖ ಅಭಿವೃದ್ಧಿ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. 1992ರಿಂದ 96ರ ವರೆಗೆ ಧರ್ಮಸ್ಥಳ ಸಂಘದಿಂದ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಹೋರಾಟ ಮಾಡಲಾಯಿತು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಕೊನೆಗೆ ಬೆಳ್ತಂಗಡಿ ಹಾಗೂ ಸಂಡೂರು ತಾಲೂಕುಗಳಲ್ಲಿ ಮಾತ್ರ ಮದ್ಯಮಾರಾಟ ನಿಷೇಧ ಮಾಡಿತು. ಪರಿಣಾಮ ಅಲ್ಲಲ್ಲಿ ಜನರು ಕಳ್ಳಬಟ್ಟಿ ತಯಾರಿ ಹಾಗೂ ಕಳ್ಳಬಟ್ಟಿ ಸೇವನೆ ಘಟನೆಗಳು ಜರುಗಿದವು. ಕೊನೆಗೆ ಸಂಘವು ಪರ್ಯಾಯ ಮಾರ್ಗ ಕಂಡುಹಿಡಿಯಲು ಮದ್ಯವರ್ಜನ ಶಿಬಿರಗಳನ್ನು ಪ್ರಾರಂಭಿಸಿತು ಎಂದರು.ಶಿವಕುಮಾರ ಶ್ರೀಗಳು ಮಾತನಾಡಿ, ಶಿಬಿರದ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಕುಟುಂಬದ ಕಷ್ಟಕ್ಕೆ ಕುಡಿತವೇ ಕಾರಣ. ಕುಡಿತವೇ ಜೀವನ ಆಗಬಾರದು. ಕುಡುಕರ ಜೀವನ ಏನಾಗಿದೆ ಎಂಬುದನ್ನು ನೋಡಿಕೊಳ್ಳಿ ಎಂದರು.ಸಮಿತಿ ಗೌರವಾಧ್ಯಕ್ಷ ರಾಜು ಕಲಾಲ, ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಎಚ್.ಬಿ. ಅಸೂಟಿ, ಚನ್ನಪ್ಪ ಕಂಠಿ, ವಿಜಯ ಕುಲಕರ್ಣಿ, ಮಂಜುನಾಥ ಮೆಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಜೋಶಿ, ಚಂದ್ರಗೌಡ ಪಾಟೀಲ, ಕೊಟ್ರೇಶ ಕೊಟ್ರಶೆಟ್ಟಿ, ಶಂಕ್ರಣ್ಣ ಇಂಗಳಳ್ಳಿ, ವಿ.ಎನ್. ಕೊಳ್ಳಿಯವರ, ನೀಲಪ್ಪ ಗುಡದನ್ನವರ, ಪರಶುರಾಮ ಭೋವಿ, ನಬೀಸಾಬ ಕಿಲೇದಾರ, ಉಮಾ ದ್ಯಾವನೂರ, ಶಿಬಿರಾಧಿಕಾರಿ ರಮೇಶ ಕೆ., ಯೋಜನಾಧಿಕಾರಿ ಮಾಲತೇಶ ದಿನೇಶ, ಆರೋಗ್ಯ ಸಹಾಯಕ ವೆಂಕಟೇಶ, ಜನಜಾಗೃತಿ ಮೇಲ್ವಿಚಾರಕ ಸಚಿನ್, ಯೋಗ ಶಿಕ್ಷಕ ಎಫ್.ವಿ. ಶಿರೂಂದಮಠ, ರಾಜೇಶಸಾಬ ತಹಶೀಲ್ದಾರ, ಆನಂದ ಗೌಳಿ ಹಾಗೂ ನವಜೀವನ ತಂಡ, ಶೌರ್ಯಶ್ರೀ ವಿಪತ್ತು ನಿರ್ವಹಣಾ ತಂಡದವರು ಇದ್ದರು.