ಅನರ್ಹರ ಬಿಪಿಎಲ್‌ ಪಡಿತರ ಕಾರ್ಡ್‌ ರದ್ದತಿಗೆ ಬದ್ಧ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ

KannadaprabhaNewsNetwork |  
Published : Dec 10, 2024, 12:30 AM ISTUpdated : Dec 10, 2024, 08:50 AM IST
ಮುನಿಯಪ್ಪ | Kannada Prabha

ಸಾರಾಂಶ

ಬಿಪಿಎಲ್‌ ಪಡಿತರ ಕಾರ್ಡ್‌ ಪಡೆದಿರುವ ಅನರ್ಹರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ ಮೂಲಕ ಗುರುತಿಸಿ, ಅವರಿಗೆ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿ ಎಪಿಎಲ್‌ ಕಾರ್ಡ್‌ ನೀಡಲಾಗುವುದು - ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

 ಸುವರ್ಣ ವಿಧಾನಪರಿಷತ್‌ : ಬಿಪಿಎಲ್‌ ಪಡಿತರ ಕಾರ್ಡ್‌ ಪಡೆದಿರುವ ಅನರ್ಹರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ ಮೂಲಕ ಗುರುತಿಸಿ, ಅವರಿಗೆ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿ ಎಪಿಎಲ್‌ ಕಾರ್ಡ್‌ ನೀಡಲಾಗುವುದು. ಅನರ್ಹರನ್ನು ಬಿಪಿಎಲ್‌ ಪಟ್ಟಿಯಿಂದ ತೆಗೆಯಲು ಪಕ್ಷಾತೀತವಾಗಿ ಎಲ್ಲರೂ ಸಹಕರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ಜೆಡಿಎಸ್‌ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಟಿ.ಎನ್‌. ಜವರಾಯಿಗೌಡ, ಟಿ.ಎ. ಶರವಣ, ಕಾಂಗ್ರೆಸ್‌ನ ಐವನ್‌ ಡಿಸೋಜಾ, ಬಿಜೆಪಿಯ ಸಿ.ಟಿ. ರವಿ, ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರು, ಆರು ತಿಂಗಳಿಂದ ನಿರಂತರವಾಗಿ ಪಡಿತರ ಪಡೆಯದೆ ಇರುವವರು ಸೇರಿದಂತೆ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಪಡಿತರ ಚೀಟಿ ಪಡೆದವರನ್ನು ಗುರುತಿಸಿ ರದ್ದುಗೊಳಿಸಲಾಗುವುದು ಎಂದರು.

ಮಹಾರಾಷ್ಟ್ರ ಬಿಟ್ಟರೆ ಇಡೀ ದೇಶದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ಕರ್ನಾಟಕದಲ್ಲಿ ಶೇ. 65ಕ್ಕಿಂತ ಹೆಚ್ಚು ಜನರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.50ರಷ್ಟು ಜನರಿಗೆ ಪಡಿತರ ಚೀಟಿ ಇದೆ. ಹೀಗಾಗಿ ಅನರ್ಹರನ್ನು ಗುರುತಿಸಿ ಅವರಿಗೆ ಎಪಿಎಲ್‌ ಕಾರ್ಡ್‌ ನೀಡಲು ಪ್ರಯತ್ನಿಸಲಾಯಿತು. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾದ ಪರಿಣಾಮ ನಿರ್ಧಾರವನ್ನು ಹಿಂಪಡೆಯಬೇಕಾಯಿತು ಎಂದು ವಿವರಿಸಿದರು.

2021ರ ಜನವರಿಯಿಂದ 2023ರ ಮೇ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಅವರಿಗೆ 13,51,30,858 ರು.ಗಳನ್ನು ದಂಡ ವಿಧಿಸಲಾಗಿರುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

20 ರು. ಪಡೆದರೆ ದೂರು ನೀಡಿ:

ಪಡಿತರ ವಿತರಕ ಅಂಗಡಿ ಮಾಲೀಕರು ಚೀಟಿದಾರರಿಂದ 20 ರು. ಪಡೆಯುತ್ತಿದ್ದರೆ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಯಾರ್‍ಯಾರ ಕಾರ್ಡ್‌ ರದ್ದು?

ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು, 6 ತಿಂಗಳಿಂದ ನಿರಂತರವಾಗಿ ಪಡಿತರ ಪಡೆಯದವರು, ಸರ್ಕಾರದ ಮಾನದಂಡಕ್ಕೆ ವಿರುದ್ಧವಾಗಿ ಪಡಿತರ ಚೀಟಿ ಪಡೆದವರ ಕಾರ್ಡ್‌ ರದ್ದು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ