14ಕ್ಕೆ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಒಳ ಮೀಸಲಾತಿ ಜಾರಿ ಸಂಬಂಧ ಹಲವು ಬಗೆಯ ಹೋರಾಟಗಳ ಮುಂಚೂಣಿ ವಹಿಸಿರುವ ಮಾದಿಗ ಸಮುದಾಯ, ಇದೀಗ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶ ಆಯೋಜಿಸಿದೆ. ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಸಮಾವೇಶ ಸಂಘಟಿಸಿದ್ದು ಡಿ.14 ರ ಶನಿವಾರ ಬೆಳಿಗ್ಗೆ 10-30 ಕ್ಕೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ನಡೆಯಲಿದೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗ ಒಳ ಮೀಸಲಾತಿ ಜಾರಿ ಸಂಬಂಧ ಹಲವು ಬಗೆಯ ಹೋರಾಟಗಳ ಮುಂಚೂಣಿ ವಹಿಸಿರುವ ಮಾದಿಗ ಸಮುದಾಯ, ಇದೀಗ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶ ಆಯೋಜಿಸಿದೆ. ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಸಮಾವೇಶ ಸಂಘಟಿಸಿದ್ದು ಡಿ.14 ರ ಶನಿವಾರ ಬೆಳಿಗ್ಗೆ 10-30 ಕ್ಕೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ನಡೆಯಲಿದೆ.ಪತ್ರಕರ್ತರ ಭವನದಲ್ಲಿ ಸೋಮವಾರ ಸಮಾವೇಶ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನ್ಯಾಯವಾದಿ ಅರುಣ್ ಕುಮಾರ್, ಒಳ ಮೀಸಲು ಜಾರಿಗೆ ಆಗ್ರಹಿಸಿ ಕಳೆದ ಎರಡುವರೆ ದಶಕಗಳಿಂದ ಮಾದಿಗ ಸಮುದಾಯ ಹಲವು ಬಗೆಯ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.

ಹೋರಾಟಕ್ಕೆ ಪೂರಕವಾಗಿ ಕಳೆದ ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಆದೇಶಿಸಿದೆ. ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಹೊರಬಂದಿರುವುದು ತುಳಿತಕ್ಕೊಳಗಾದ ಶೋಷಿತ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ರಹದಾರಿ ಸಿಕ್ಕಂತಾಗಿದೆ ಎಂದು ತಿಳಿಸಿದರು

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಬಿ.ಆರ್. ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರಶರ್ಮ ಒಳಗೊಂಡಂತೆ 6:1ರ ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ಉಪವರ್ಗೀಕರಣ ಮಾಡಬಹುದೆಂದು ಆಯಾಯಾ ರಾಜ್ಯಗಳಿಗೆ ತೀರ್ಪನ್ನು ನೀಡಿರುತ್ತಾರೆ. ಈ ಹಿಂದೆ ಅಧಿಕರಾದಲ್ಲಿ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸದಾಶಿವ ಆಯೋಗವನ್ನು ರಚಿಸಿ ನ್ಯಾ. ಸದಾಶಿವರವರ ನೇತೃತ್ವದಲ್ಲಿ ಸತತ 7 ವರ್ಷಗಳ ಕಾಲ 20 ಲಕ್ಷದ 54 ಸಾವಿರ ಕುಟುಂಬಗಳನ್ನು ವೈಜ್ಞಾನಿಕ ಸಮೀಕ್ಷೆಗೊಳಪಡಿಸಿತ್ತು ಎಂದರು. ಪರಿಶಿಷ್ಟರ ನೂರೊಂದು ಜಾತಿಗಳಲ್ಲಿ ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ. 6ರಷ್ಟು, ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ.5ರಷ್ಟು, ಸ್ಪೃಶ್ಯ ಜಾತಿಗಳಾದ ಕೊರಮ, ಕೊರಚ, ಬೋವಿ, ಲಂಬಾಣಿಗಳಿಗೆ ಶೇ.3ರಷ್ಟು, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ.1ರಷ್ಟನ್ನು ಜನಸಂಖ್ಯಾ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಲು ಅವಕಾಶ ಇದೆ ಎಂದು ತಿಳಿಸಿದರು.

ಮಾದಿಗ ಸಮಾಜವನ್ನು ಜಾಗೃತಿಗೊಳಿಸಿ, ಒಳಮೀಸಲಾತಿಯನ್ನು ಸರ್ಕಾರ ಶೀಘ್ರವಾಗಿ ಜಾರಿಗೂಳಿಸಲು ಸನ್ನದ್ಧಗೊಳಿಸುವ ಸಲುವಾಗಿ ಸಮಾವೇಶ ಸಂಘಟಿಸಲಾಗಿದೆ. ಚಾಮರಾಜನಗರ ಗಡಿಜಿಲ್ಲೆಯಿಂದ ಬೀದರ್ ಜಿಲ್ಲೆಯ ತುತ್ತ ತುದಿಯವರೆಗೂ ಒಳಮೀಸಲಾತಿಯನ್ನು ಪಡೆಯುವ ಸಲುವಾಗಿ ಡಿಸೆಂಬರ್ 14 ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡ ಆರ್.ವಿ. ತಿಮ್ಮಾಪುರ, ಮಾಜಿ ಸಚಿವ ಎಚ್. ಅಂಜನೇಯ, ಸಂಸದ ಗೋವಿಂದ ಕಾರಜೋಳ, ಮಾಜಿ ಸಂಸದ ಎ. ನಾರಾಯಣಸ್ವಾಮಿ ಸೇರಿದಂತೆ ಇತರೆ ಮಾದಿಗ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಸುಮಾರು 700ಕ್ಕೂ ಹೆಚ್ಚು ಮಾದಿಗ ಸಮುದಾಯದ ವಕೀಲರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಕೈಗೊಳ್ಳಲಾಗುವ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅರುಣ್ ಕುಮಾರ್ ಹೇಳಿದರು.ನ್ಯಾಯಾವಾದಿಗಳಾದ ಬೀಸನ್ನಹಳ್ಳಿ ಜಯ್ಯಣ್ಣ, ಕುಮಾರ್ ಚಂದ್ರಪ್ಪ, ರಾಜಣ್ಣ, ಸುರೇಶ್, ರಾಮಣ್ಣ, ರಮೇಶ್, ರಾಮಬಾಬು, ಲೋಕೇಶ್, ದಾಸಪ್ಪ, ರಾಜಪ್ಪ, ನರಹರಿ ಸುದ್ದಿಗೋಷ್ಠಿಯಲ್ಲಿದ್ದರು.

Share this article