- ಚಿಕ್ಕಕೆರೆ, ದೊಡ್ಡಕೆರೆ, ದಳವಾಯಿ ಕೆರೆಗಳ ಅಭಿವೃದ್ಧಿ, ವಿಶೇಷ ಸಭೆಯಲ್ಲಿ ತೀರ್ಮಾನ
ಅಮೃತ್ 2.0 ಯೋಜನೆಯ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರಾಜ್ಯಮಟ್ಟದ ಉನ್ನತ ಅಧಿಕಾರ ಸಮಿತಿ ಸಭೆಯಲ್ಲಿ ತಯಾರಿಸಿರುವ ಕ್ರಿಯಾ ಯೋಜನೆಯಂತೆ ಪುರಸಭೆ ವ್ಯಾಪ್ತಿಯ ಚಿಕ್ಕಕೆರೆ, ದೊಡ್ಡಕೆರೆ ಹಾಗೂ ದಳವಾಯಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಉದ್ಯಾನವನಗಳ ಅಭಿವೃದ್ಧಿ ಪಡಿಸಲು ಪಾರ್ಕ್‌ಗಳ ಆಯ್ಕೆ ಕುರಿತಂತೆ ಪರಿಶೀಲಿಸಲು ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.ಸೋಮವಾರ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ ಮತ್ತು ಆಯವ್ಯಯ ಪೂರ್ವಬಾವಿ ಸಭೆ ಪ್ರಾರಂಭದಲ್ಲಿ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಜಲ ಮೂಲಗಳ ಪುನಶ್ಚೇತನ ಹಾಗೂ ಹಸಿರು ಜಾಗ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು ಸಭೆಯಲ್ಲಿ ಠರಾವು ಮಾಡಿ ಮಾಹಿತಿ ಸಲ್ಲಿಸಲು ಕೋರಿರುವ ವಿಷಯ ಪ್ರಸ್ತಾಪಿಸಿ ಪಟ್ಟಣದಲ್ಲಿ ₹4 ಕೋಟಿ ಗಳಲ್ಲಿ ದಳವಾಯಿ ಕೆರೆ, ಚಿಕ್ಕೆರೆ ಮತ್ತು ದೊಡ್ಡಕೆರೆ ಈ ಮೂರು ಕೆರೆಗಳು ಹಾಗೂ ₹1 ಕೋಟಿನಲ್ಲಿ ಎರಡು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಜನದಟ್ಟಣೆ ಇರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಊರಿನ ಅಭಿವೃದ್ಧಿ ವಿಚಾರದಲ್ಲಿ ಪುರಸಭಾ ಸದಸ್ಯರಾದ ನಾವೆಲ್ಲರೂ ಒಂದೇ ಎಂದು ತಿಳಿಸಿದ ಅವರು ಪುರಸಭೆಯಿಂದ ಇನ್ನೊಂದು ಮುಕ್ತಿವಾಹನ ಅಗತ್ಯವಿದೆ. ಸಾರ್ವಜನಿಕ ಆಸ್ಪತ್ರೆ ಶವಾಗಾರದಿಂದ ಶವವನ್ನು ಮನೆಗೆ ಸಾಗಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಬಡವರಿಗೆ ಅನುಕೂಲವಾಗುವಂತೆ ಪುರಸಭೆ ಮುಕ್ತಿ ವಾಹನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಟಿ.ಜಿ. ಅಶೋಕ್ ಕುಮಾರ್ ಮಾತನಾಡಿ ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿ ವಿಚಾರದಲ್ಲಿ ಅನುಮೋದನೆಗೆ ಮಾತ್ರ ನಮ್ಮನ್ನು ಕೇಳಿದ್ದಾರೆ. ಈ ವಿಚಾರದಲ್ಲಿ ಮೊದಲು ಸಭೆ ಕರೆಯಬೇಕಿತ್ತು, ಈಗಾಗಲೇ ಅಭಿವೃದ್ಧಿ ಗೊಂಡ ಪಾರ್ಕ್ ಗಳನ್ನು ಮತ್ತೆ ಅಭಿವೃದ್ಧಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಅಮೃತ್ 2.0 ಯೋಜನೆಯಡಿ ತರೀಕೆರೆ ಪಟ್ಟಣಕ್ಕೆ 24X7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಪ್ರತಿ ಮನೆಗೂ 24 X7 ಕುಡಿಯುವ ನೀರು ಕೊಡಬೇಕು ಎನ್ನುವ ಉದ್ದೇಶ ಯೋಜನೆ ಹೊಂದಿದೆ ಎಂದು ತಿಳಿಸಿದರು.
ನಂತರ ನೆಡೆದ ಅಯವ್ಯಯ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಟಿ.ಎಂ.ಭೋಜರಾಜ್ ಪುರಸಭೆ ಅದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ಮತ್ತು ಪಟ್ಟಣದ ಅಭಿವೃದ್ದಿ ಕುರಿತು ಅನೇಕ ಸಲಹೆಗಳನ್ನು ನೀಡಿದರು.
9ಕೆಟಿಆರ್.ಕೆ.1ಃ
---------------------