ನವಲಗುಂದ:

ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯಡಿ ₹9.37 ಕೋಟಿ ವೆಚ್ಚದದಲ್ಲಿ ಕೆರೆ ಹೂಳೆತ್ತುವ ಹಾಗೂ ಅಭಿವೃದ್ಧಿ ಪಡಿಸುವ ಯೋಜನೆಗೆ 2022-23ರಲ್ಲಿಯೇ ಹಣ ಮಂಜೂರಾಗಿದ್ದರೂ ಸ್ಥಳೀಯ ಶಾಸಕರು ಸ್ವಂತ ಹಣದಲ್ಲಿ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳುವ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಗಂಭೀರ ಆರೋಪ ಮಾಡಿದರು.

ಮಂಗಳವಾರ ತಾಲೂಕಿನ ಗುಡಿಸಾಗರ ಗ್ರಾಮದ ಕೆರೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಡಿಸಾಗರ ಗ್ರಾಮದ ಕೆರೆ ಅಭಿವೃದ್ಧಿಗಾಗಿ ಅಮೃತ ಸರೋವರ ಯೋಜನೆಯಡಿ ₹42 ಲಕ್ಷ ಮಂಜೂರಾಗಿದ್ದರೂ ಸತ್ಯವನ್ನು ಮರೆಮಾಚಿಟ್ಟ ಶಾಸಕರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅಪೂರ್ಣ ಕಾಮಗಾರಿ ಮಾಡಿದ್ದರೆ, ನಿಯಮದ ಪ್ರಕಾರ ಕೆರೆ ಹೂಳೆತ್ತದೆ ತಮ್ಮ ಸಂಬಂಧಿಕರಿಂದ ಅವಸರದಲ್ಲಿ ಅರ್ಧಮರ್ಧ ಕಾಮಗಾರಿ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆಂದು ದೂರಿದರು.

ವಿಧಾನಸಭಾ ಕ್ಷೇತ್ರಾದ್ಯಂತ ಒಟ್ಟು 16 ಗ್ರಾಮಗಳ ಕೆರೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅಮೃತ ಸರೋವರ ಯೋಜನೆಯಡಿ ₹ 9 ಕೋಟಿ ಮಂಜೂರು ಮಾಡಿದ್ದರೂ ಇದರಲ್ಲಿ ಎಷ್ಟು ಕೆರೆ ಅಭಿವೃದ್ಧಿಪಡಿಸಿದ್ದಾರೆ ಹಾಗೂ ಯಾವ ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಕ್ಷೇತ್ರಕ್ಕೆ ನೂರಾರು ಕೋಟಿ ರುಪಾಯಿ ಅನುದಾನ ಬಂದಿದೆ ಎಂದು ಬುರುಡೆ ಬಿಡುತ್ತಿರುವ ಶಾಸಕರು, ಅಭಿವೃದ್ಧಿ ಹೆಸರಿನಲ್ಲಿ ಸಂಬಂಧಿಕರ ಹೆಸರಿನಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿರುವುದು ಕ್ಷೇತ್ರದ ಜನತೆಗೆ ತಿಳಿದಿದೆ ಎಂದರು.ಇದೇ ವೇಳೆ ಅಮೃತ ಸರೋವರ ಯೋಜನೆಯಡಿ ತಾಲೂಕಿನ ಯಾವ ಕೆರೆಗಳಿಗೆ ಎಷ್ಟು ಹಣ ಮಂಜೂರಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು.


ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ, ಗುರುನಾಥ ಉಳ್ಳಾಗಡ್ಡಿ, ಸಿದ್ದಣ್ಣ ಕಿಟಗೇರಿ, ಎಸ್.ಬಿ. ದಾನಪ್ಪಗೌಡರ, ಶಿವನಗೌಡ ಕುಲಕರ್ಣಿ, ಭೀಮಣ್ಣ ಪಟ್ಟೇದ, ಫಕ್ಕೀರಪ್ಪ ಜಕ್ಕಪ್ಪನವರ, ಮಲ್ಲಿಕಾರ್ಜುನಗೌಡ ಸಂಗನಗೌಡರ, ದ್ಯಾಮಣ್ಣ ಬಾಗೂರ, ಗೌಡಪ್ಪಗೌಡ ದೊಡಮನಿ, ಫಕ್ಕೀರಗೌಡ ವೆಂಕನಗೌಡರ, ಜಗದೀಶ ಉಳ್ಳಾಗಡ್ಡಿ, ನೀರಾವರಿ ನಿಗಮದ ಎಇಇ ಮಾರುತಿ ಗೋಕಾಕ ಮತ್ತಿತರರಿದ್ದರು.