ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಹಿತ್ಯ ಕ್ಷೇತ್ರಕ್ಕೆ ಬರುವ ಯುವ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ವೆಂಕಟೇಶ್ ನಗರದ ಬಸವ ಕೇಂದ್ರದಲ್ಲಿ ಭಾನುವಾರ ಬಸವ ಕೇಂದ್ರ ಹಾಗೂ ನಂದಿ ವಿದ್ಯಾಸಂಸ್ಥೆಯಿಂದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಅವರ ಲಂಕೇಶ್ ಒಂದು ನೆನಪು ಶೀರ್ಷಿಕೆಯಡಿ ಭರ್ಮಜ್ಜಿ ಕಥಾ ಪ್ರಸಂಗ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರ ಹೆಚ್ಚು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವ ಬರಹಗಾರರು ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವಂತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಎಲ್ಲರೂ ಕಥೆ, ಕಾದಂಬರಿ ಬರೆಯುವುದಕ್ಕೆ ಸಾಧ್ಯವಿಲ್ಲ. ಸಾಹಿತ್ಯದ ಬಗ್ಗೆ ಒಲವು, ಅಭಿರುಚಿ, ಆಸಕ್ತಿ ಇರಬೇಕು ಎಂದರು
ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಸಾಕಷ್ಟಿದ್ದು, ಕುವೆಂಪು, ಪಿ.ಲಂಕೇಶ್, ನಾ.ಡಿಸೋಜಾ ಸೇರಿ ಅನೇಕ ದಿಗ್ಗಜರನ್ನು ನೀಡಿದೆ. ಅಂತಹ ಸಾಹಿತ್ಯದ ನೆಲೆಬೀಡಿನಲ್ಲಿ ಇದೀಗ ಡಿ.ಬಿ.ಶಂಕರಪ್ಪ ಅವರು ಕೂಡ ಕಾಲಿಟ್ಟಿದ್ದಾರೆ. ಶಿಕ್ಷಕರಾಗಿ ನಿವೃತ್ತರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಬ್ಬ ಸೃಜನಶೀಲ ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರಿಂದ ಮತ್ತಷ್ಟು ಸಮಾಜಮುಖಿ ಕಥೆ, ಕಾದಂಬರಿಗಳು ಬರುವಂತಾಗಲಿ ಎಂದು ಆಶಿಸಿದರು.ವಿಶೇಷವಾಗಿ ಪಿ.ಲಂಕೇಶ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಲೇಖಕರಾಗಿ, ಪತ್ರಕರ್ತರಾಗಿ ಸಮಾಜವನ್ನು ಎಚ್ಚರಿಸುವ ಧ್ವನಿಯಾಗಿ ಕೆಲಸ ಮಾಡಿದರು. ಸತ್ಯವನು ಬರೆಯಲು ಹಿಂದೆ-ಮುಂದೆ ಯೋಚನೆ ಮಾಡುತ್ತಿರಲಿಲ್ಲ. ಲಂಕೇಶ್ ಪತ್ರಿಕೆ ಮೂಲಕ ರಾಜಕೀಯ ಕ್ಷೇತ್ರದ ದಿಗ್ಗಜರನ್ನೂ ಎಚ್ಚರಿಸುವ ಕೆಲಸ ಮಾಡಿದ್ದರು ಎಂದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ್, ಲಕ್ಷಾಂತರ ಲೇಖಕರು, ಬರಹಗಾರರನ್ನು ಹುಟ್ಟುಹಾಕಿದ ಮಹಾತ್ಮ ಪಿ.ಲಂಕೇಶ್. ಅವರ ಬರವಣಿಗೆಯಲ್ಲಿ ಗ್ರಾಮೀಣ ಭಾಷೆ ಹೆಚ್ಚಿದ್ದರೂ ಓದುಗರಿಗೆ ನಿರಾಸೆ ಮೂಡಿಸಿಲ್ಲ ಎಂಬುದು ವಿಶೇಷ ಎಂದರು.
ಗುರು ಲಂಕೇಶ್ ಅವರ ಬಗ್ಗೆ ಶಿಷ್ಯ ಡಿ.ಬಿ.ಶಂಕರಪ್ಪ ಅವರು ಬರವಣಿಗೆ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ ಪತ್ರಿಕೆ ಮೂಲಕವೇ ಜನ ಜಾಗೃತಿಯನ್ನು ಮಾಡಿ, ಇರುವ ಸರ್ಕಾರವನ್ನು ತೆಗೆದು, ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುವ ಕೀರ್ತಿ ಲಂಕೇಶ್ ಅವರ ಪೆನ್ನಿಗಿತ್ತು ಎಂದರು.
ಬಸವ ಕೇಂದ್ರ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಖಕಿ ಡಾ. ಪದ್ಮಿನಿ ನಾಗರಾಜು ಪುಸ್ತಕ ಕುರಿತು ಮಾತನಾಡಿದರು. ಬಸವ ಕೇಂದ್ರ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ನೆಲ್ಲಿಸರ, ನಾಗರಾಜ್, ಈಶ್ವರ್, ಲೇಖಕ ಡಿ.ಬಿ.ಶಂಕರಪ್ಪ, ಮೋಹನ್ ಬಾಬು ಇದ್ದರು.