ಮಾಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ತಾಲೂಕಿನ ಜನತೆಯ ಆಶಯದಂತೆ ಸಮಗ್ರ ಅಭಿವೃದ್ಧಿ ಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಡಿಪ್ಲೊಮಾ ಕಾಲೇಜು ಆರಂಭಿಸುವುದು ಪಟ್ಟಣದ ಗೌರಮ್ಮನಕೆರೆ, ಹೊಂಬಾಡಮ್ಮನಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ. ಕುದೂರಿನಲ್ಲಿ 10 ಕೋಟಿ ವೆಚ್ಚದಲ್ಲಿ ಕೆಪಿಎಸ್ಸಿ ಶಾಲಾ ಕಟ್ಟಡವನ್ನು ಕಟ್ಟಲು 15 ದಿನದ ಒಳಗೆ ಭೂಮಿಪೂಜೆ, ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಹೇಮಾವತಿ ಯೋಜನೆಗೆ ಎಕ್ಸ್ ಪ್ರೆಸ್ ನಾಲೆ ಅಭಿವೃದ್ಧಿಗೆ 900 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎರಡು ವರ್ಷದಲ್ಲಿ ಈ ಎಲ್ಲಾ ಯೋಜನೆ ಜಾರಿಗೆ ತರಲಾಗುತ್ತದೆ. ತಾಲೂಕಿಗೆ 25 ಹೊಸ ಬಸ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಗ್ರಾಮೀಣರಿಗೆ ಅನುಕೂಲವಾಗಲಿದ್ದು ಐದು ವರ್ಷದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆಂದು ಶಾಸಕರು ತಿಳಿಸಿದರು.
ತಹಶೀಲ್ದಾರ್ ಸುರೇಂದ್ರ ಮೂರ್ತಿ ಮಾತನಾಡಿ, ಸಂವಿಧಾನದಡಿ ಸರ್ವರಿಗೂ ಸಮಪಾಲು ಸಮಬಾಳು ಅವಕಾಶ ಕಲ್ಪಸಿಕೊಟ್ಟ ಮಹನೀಯರನ್ನು ಸ್ಮರಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ದೇಶ ಬೇರೆ ದೇಶಗಳ ಜೊತೆ ಈಗ ಪೈಪೋಟಿಯಲ್ಲಿ ನಿಲ್ಲುವ ಸ್ಥಿತಿಯಲ್ಲಿದ್ದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.ತಹಸೀಲ್ದಾರ ಸುರೇಂದ್ರ ಮೂರ್ತಿ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು. ತಾಲೂಕಿನ ಗಣ್ಯರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.