ವ್ಯಾಜ್ಯ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ- ಸಚಿವ ಎಚ್‌ಕೆಪಿ

KannadaprabhaNewsNetwork |  
Published : Nov 20, 2023, 12:45 AM IST
ಪೋಟೋ  | Kannada Prabha

ಸಾರಾಂಶ

ರಾಜ್ಯದಲ್ಲಿನ ಎಲ್ಲ ಗ್ರಾಮಗಳನ್ನು ವ್ಯಾಜ್ಯ ಮುಕ್ತ ಮಾಡಲು ಸಂಕಲ್ಪ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ ಸಂವಿಧಾನ ದಿನವಾದ ನ. 26ರಂದು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

26ರ ಸಂವಿಧಾನ ದಿನದಂದೇ ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ ಕಾರ್ಯ ಚಟುವಟಿಕೆ ಪ್ರಾರಂಭ

ಗದಗ:ರಾಜ್ಯದಲ್ಲಿನ ಎಲ್ಲ ಗ್ರಾಮಗಳನ್ನು ವ್ಯಾಜ್ಯ ಮುಕ್ತ ಮಾಡಲು ಸಂಕಲ್ಪ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ ಸಂವಿಧಾನ ದಿನವಾದ ನ. 26ರಂದು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ವೇಳೆಯಲ್ಲಿಯೂ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಿಸಲು ಪ್ರಯತ್ನ ಪ್ರಾರಂಭಿಸಲಾಗಿತ್ತು. ಕಾರಣಾಂತರಗಳಿಂದ ಅದು ಪೂರ್ಣಗೊಂಡಿರಲಿಲ್ಲ. ಈಗ ಕಾನೂನು ಸಚಿವರಾದ ನಂತರ ಮತ್ತೆ ಚಾಲನೆ ನೀಡಲಾಗಿದೆ ಎಂದರು.

ಕರ್ನಾಟಕ ಸಂಭ್ರಮದ ಕಾಲದಲ್ಲಿ ರಚನಾತ್ಮಕವಾದ ಹೆಜ್ಜೆಗಳನ್ನು ಇಡಲಾಗುತ್ತಿದೆ. ವ್ಯಾಜ್ಯ ಮುಕ್ತ ಗ್ರಾಮಗಳ ನಿರ್ಮಾಣ ಮಾಡುವಲ್ಲಿ ಸಾರ್ವಜನಿಕರು, ಕಾನೂನು ಇಲಾಖೆ, ಪೊಲೀಸ್, ವಿರೋಧ ಪಕ್ಷಗಳು, ಮಾಧ್ಯಮಗಳು, ಸಂಘಟನೆಗಳು, ಗ್ರಾಮಗಳ ಹಿರಿಯರು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಬೇಕಾಗುತ್ತದೆ. ಈಗಾಗಲೇ ಈ ಕುರಿತು ಗದಗ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಅದರ ಆಧಾರದಲ್ಲಿ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಗದಗ ನಗರದ ಮಧ್ಯ ಭಾಗದಲ್ಲಿರುವ ಅಮೂಲ್ಯ ಸ್ಥಳದಲ್ಲಿ (ಸಿಟಿ ಸೆಂಟರ್) ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ವಿಶೇಷ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಕಾನೂನಾತ್ಮಕವಾಗಿ ಒಂದು ಪ್ರಾಧಿಕಾರವನ್ನೇ ರಚಿಸಿ ಪ್ರತಿಯೊಂದು ಕಾನೂನಾತ್ಮಕ ಕಾರ್ಯ ಸಾಧುವಾಗುವಂತೆ ಮಾಡಲಾಗುವುದು ಎಂದರು.

ಈ ವಿಶೇಷ ಯೋಜನೆಯಡಿ ವ್ಯಾಪಾರ, ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಮಾರಾಟ ವ್ಯವಸ್ಥೆಯನ್ನು ಒಂದೇ ವೇದಿಕೆಯಲ್ಲಿ ಕಲ್ಪಿಸುವ ಚಿಂತನೆಯನ್ನು ಹೊಂದಲಾಗಿದ್ದು, ಇದಕ್ಕಾಗಿ ವಿಶೇಷ ಗಮನ ನೀಡಲಾಗಿದೆ. ಇನ್ನು ಅವಳಿ ನಗರದ ಕುಡಿಯುವ ನೀರಿಗಾಗಿ ಹಲವಾರು ವಿಶೇಷ ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕಾಗಿ ₹34 ಕೋಟಿಗಳ ಯೋಜನೆಗೆ ಈಚೆಗೆ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದ ಅವರು, ಗದಗ ಜಿಲ್ಲೆಯಲ್ಲಿ ಆಗಿರುವ ಕ್ಯಾಥ್ ಲ್ಯಾಬ್ ಅಭಿವೃದ್ಧಿ ಸೇರಿದಂತೆ ವಿಶೇಷ ಯೋಜನೆಗಳ ಕುರಿತು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!