ಕನ್ನಡಪ್ರಭ ವಾರ್ತೆ ಯಾದಗಿರಿ ಉತ್ತಮ ಸಾರ್ವಜನಿಕ ಆಡಳಿತಕ್ಕಾಗಿ ಕಾನೂನುಗಳನ್ನು ಆರ್ಥೈಸಿಕೊಂಡು ಅನುಸರಿಸಿದರೆ, ಉತ್ತಮ ಸಮಾಜಕ್ಕೆ ನೆರವಾಗಲಿದೆ ಎಂದು ರಾಜ್ಯ ಉಪ ಲೋಕಾಯುಕ್ತರು, ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಹೇಳಿದರು.
ಲೋಕಾಯುಕ್ತ ಸಂಸ್ಥೆ, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಅವಿನಾಭಾವ ಸಂಬಂಧ ವೃದ್ಧಿಸಲು ಶ್ರಮಿಸುತ್ತಿದೆ. ಸರ್ಕಾರದ ಧ್ಯೇಯೋದ್ದೇಶ ಈಡೇರಿಸಲು, ಉತ್ತಮ ಸಾರ್ವಜನಿಕ ಆಡಳಿತದ ದೆಸೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಭ್ರಷ್ಟಾಚಾರ ತಡೆಯಲು ಪ್ರತಿಯೊಬ್ಬರು ಪ್ರತಿನಿತ್ಯ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಅಸಮಾನತೆ ಮತ್ತು ಭ್ರಷ್ಟಾಚಾರ ಹೋಗಲಾಡಿಸಲು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಧ್ಯೇಯೋದ್ದೇಶಗಳ ಅನ್ವಯ, ಅರ್ಹ ವ್ಯಕ್ತಿಗೆ ಕಾನೂನುಬದ್ಧವಾಗಿ ಮತ್ತು ಸಕಾಲಕ್ಕೆ ಸವಲತ್ತು ದೊರೆಯುತ್ತಿದೆಯೇ ಎಂಬುವದರ ಬಗ್ಗೆ ಲೋಕಾಯುಕ್ತ ಸಂಸ್ಥೆಯು ನಿಗಾ ಇಡುವ ಜೊತೆಗೆ ಸೂಕ್ತ ಕ್ರಮ ಸಹ ಕೈಗೊಳ್ಳುತ್ತಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನೈಸರ್ಗಿಕ ಕಾನೂನು ತತ್ವಗಳ ಪಾಲನೆ ಅತಿಮುಖ್ಯವಾಗಿದ್ದು, ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.ಸಾರ್ವಜನಿಕರ ವೈಯಕ್ತಿಕ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಪ್ರಕರಣ ಮುಂದುವರೆಸಿಕೊಂಡು ಹೋಗಲು ಅಸಹಕಾರ ತೋರುವ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲು, ಲಂಚದ ವಿಷಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು, ಸುಳ್ಳು ದೂರುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದ್ದು, ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಾಯ್ದೆ, ಬಾಲ್ಯ ವಿವಾಹ ನಿರ್ಮೂಲನೆ ಕಾಯ್ದೆ, ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ಮತ್ತು ರಕ್ಷಣಾ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಉದಾಹರಣೆಗಳೊಂದಿಗೆ ಉತ್ತಮ ಆಡಳಿತದ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಅದರಂತೆ ಅಧಿಕಾರಿಗಳೊಂದಿಗೆ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಿದರು.