ತಹಸೀಲ್ದಾರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬದ್ಧ-ರಾಯರಡ್ಡಿ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ತಹಸೀಲ್ದಾರ ಕಚೇರಿ ನಿರ್ಮಾಣ ಮಾಡಬೇಕು ಎಂದು ನಿಗದಿಪಡಿಸಿದ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕುಕನೂರಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸರ್ಕಾರಿ ಜಾಗವಿದೆ. ಸರ್ಕಾರಿ ಜಾಗ ಇರದಿದ್ದರೆ ಮಾತ್ರ ಖಾಸಗಿ ಮಾಲೀಕತ್ವದ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಇಲ್ಲಿನ ಸರ್ಕಾರಿ ಜಾಗದಲ್ಲಿ ಕೋರ್ಟ್ ಸಂಕೀರ್ಣ, ಕ್ರೀಡಾಂಗಣ, ಸಮುದಾಯ ಭವನ, ತಹಸೀಲ್ದಾರ ಕಚೇರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸೂಚಿಸಿದರೆ, ಅಲ್ಲಿಯೇ ನಿರ್ಮಾಣ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ತಹಸೀಲ್ದಾರ ಕಚೇರಿ ಕಟ್ಟಡಕ್ಕೆ ಬದ್ಧ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.ಪಟ್ಟಣದ ಎಪಿಎಂಸಿಯಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಜರುಗಿದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತಹಸೀಲ್ದಾರ ಕಚೇರಿ ಕಟ್ಟಡಕ್ಕೆ ಭೂ ಸ್ವಾಧೀನ ಆಗದೇ ಅನುದಾನದ ಮೂರ್ಖ ಆದೇಶ ಹೊರಡಿಸಿ ಚುನಾವಣೆಗೋಸ್ಕರ ರಾಜಕೀಯ ಮಾಡಿದೆ. ಹಿಂದೆ ನೀಡಿದ್ದೇವೆ ಎನ್ನುವ ಹಿಂದಿನ ಸರ್ಕಾರದ ಅನುದಾನವನ್ನು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ೨೦೨೩-೨೪ನೇ ಸಾಲಿನ ಲೆಕ್ಕ ಶೀರ್ಷಿಕೆಯಲ್ಲಿ ಭರಿಸಲು ಆದೇಶಿಸಿದ್ದು, ಸದ್ಯ ನಾನು ಸಿಎಂ ಸಿದ್ದರಾಮಯ್ಯಗೆ ಹೇಳಿ ತಹಸೀಲ್ದಾರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸುತ್ತಿದ್ದೇನೆ ಎಂದರು.ತಹಸೀಲ್ದಾರ ಕಚೇರಿ ನಿರ್ಮಾಣ ಮಾಡಬೇಕು ಎಂದು ನಿಗದಿಪಡಿಸಿದ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕುಕನೂರಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸರ್ಕಾರಿ ಜಾಗವಿದೆ. ಸರ್ಕಾರಿ ಜಾಗ ಇರದಿದ್ದರೆ ಮಾತ್ರ ಖಾಸಗಿ ಮಾಲೀಕತ್ವದ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಇಲ್ಲಿನ ಸರ್ಕಾರಿ ಜಾಗದಲ್ಲಿ ಕೋರ್ಟ್ ಸಂಕೀರ್ಣ, ಕ್ರೀಡಾಂಗಣ, ಸಮುದಾಯ ಭವನ, ತಹಸೀಲ್ದಾರ ಕಚೇರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸೂಚಿಸಿದರೆ, ಅಲ್ಲಿಯೇ ನಿರ್ಮಾಣ ಮಾಡಲಾಗುವುದು ಎಂದರು.₹೪೦ ಕೋಟಿ ವೆಚ್ಚದಲ್ಲಿ ತಹಸೀಲ್ದಾರ ಕಚೇರಿ ಕಟ್ಟಡ ಮಾದರಿ ರೀತಿ ನಿರ್ಮಿಸುವೆ. ₹೨೭೭ ಕೋಟಿ ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಲ್ಲಿ ತುಂಗಭದ್ರಾ ನೀರು ತರಲು ಯೋಜನೆ ಸಿದ್ಧವಾಗಿದೆ. ವಾರದೊಳಗೆ ಟೆಂಡರ್ ಆಗಲಿದೆ. ಒಬ್ಬರಿಗೆ ನಿತ್ಯ ೧೩೦ ಲೀ. ಶುದ್ಧ ಕುಡಿವ ನೀರು ಒದಗಿಸುವ ಯೋಜನೆ ಇದಾಗಿದೆ. ೨೦೫೧ನೇ ಇಸ್ವಿಯ ಜನಗಣತಿಗೆ ಹೊಂದುವಂತೆ ಯೋಜನೆ ರೂಪಿಸಲಾಗಿದೆ ಎಂದರು.ಯಲಬುರ್ಗಾಕ್ಕೆ ₹೧೨೫ ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಕುಕನೂರಿಗೂ ಮುಂದಿನ ದಿನಗಳಲ್ಲಿ ಒಳಚರಂಡಿ ನಿರ್ಮಿಸುತ್ತೇನೆ. ಕುಕನೂರಿಗೆ ೧೦೦ ಬೆಡ್ ಆಸ್ಪತ್ರೆ ಮಂಜೂರು ಮಾಡಿಸುತ್ತೇನೆ. ಕುಕನೂರು ಎಪಿಎಂಸಿಯಲ್ಲಿ ₹೭ ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೆಜ್ ಗೋದಾಮು, ₹೩ ಕೋಟಿ ವೆಚ್ಚದಲ್ಲಿ ಯಲಬುರ್ಗಾದಲ್ಲಿ ನೂತನ ಎಪಿಎಂಸಿ, ಕ್ಷೇತ್ರದಲ್ಲಿ ೧೦ ಪ್ರೌಢಶಾಲೆ, ೧೦ ಬಸ್ ನಿಲ್ದಾಣ ಮಂಜೂರು ಮಾಡಿಸಿದ್ದೇನೆ. ಶೀಘ್ರದಲ್ಲಿ ೩೮ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳುತ್ತೇನೆ ಎಂದರು.ಎಸಿ ಮಹೇಶ ಮಾಲಗಿತ್ತಿ ಮಾತನಾಡಿ, ೨೮ ಇಲಾಖೆ ಒಳಗೊಂಡ ತಹಸೀಲ್ದಾರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಲು ಜನರು ಸಹಕಾರ ನೀಡಬೇಕು. ಇದರಿಂದ ತಾಲೂಕು ಅಭಿವೃದ್ಧಿ ಸಾಧ್ಯ ಎಂದರು.ತಹಸೀಲ್ದಾರ್ ಎಚ್. ಪ್ರಾಣೇಶ ಮಾತನಾಡಿದರು.ತಾಪಂ ಇಒ ಸಂತೋಷ ಬಿರಾದಾರ, ಸಿಪಿಐ ಮಹಾಂತೇಶಗೌಡ, ಅಸಿಸ್ಟಂಟ್ ಎಂಜಿನಿಯರ್ ಹೇಮಂತರಾಜ್, ಪಪಂ ಮುಖ್ಯಾಧಿಕಾರಿ ಸುಬ್ರಮಣ್ಯಂ, ಎಪಿಎಂಸಿ ಕಾರ್ಯದರ್ಶಿ ಸಿಂಗ್, ಪ್ರಮುಖರಾದ ಹನುಮಂತಗೌಡ ಚಂಡೂರು, ಬಸವರಾಜ ಉಳ್ಳಾಗಡ್ಡಿ, ಚಂದ್ರಶೇಖರಯ್ಯ ಹಿರೇಮಠ, ಖಾಸಿಂಸಾಬ್ ತಳಕಲ್, ಮಂಜುನಾಥ ಕಡೆಮನಿ, ಹನುಮೇಶ ಕಡೆಮನಿ ಇದ್ದರು.ಕುರ್ಚಿ ಎತ್ತಿಕೊಂಡು ನಡೆದ ಶಾಸಕ ರಾಯರಡ್ಡಿ: ಶಾಸಕ ಬಸವರಾಜ ರಾಯರಡ್ಡಿ ತಾವು ಕುಳಿತ ಕುರ್ಚಿಯನ್ನು ತಾವೇ ಎತ್ತಿಕೊಂಡು ಹೋದ ಘಟನೆ ನಡೆಯಿತು.ಎಪಿಎಂಸಿ ಗೋದಾಮಿನ ಒಳಗಡೆ ಅಭಿವೃದ್ಧಿ ಸಭೆ ಏರ್ಪಡಿಸಲಾಗಿತ್ತು. ಮೈಕ್‌ನಲ್ಲಿ ಮಾತನಾಡುತ್ತಿರುವುದರಿಂದ ಏಕೊ ಆಗುತ್ತಿತ್ತು. ಸಭೆಯ ಉದ್ದೇಶವೇ ಹಾಳಾಗುತ್ತದೆ. ಹೊರಗಡೆ ಕುಳಿತು ಸಭೆ ಮಾಡೋಣ ಎಂದು ಶಾಸಕ ಬಸವರಾಜ ರಾಯರಡ್ಡಿ ನೆರೆದಿದ್ದ ಜನರಿಗೆ ಕೇಳಿಕೊಂಡು, ನಿಮ್ಮ ಕುರ್ಚಿ ನೀವೇ ಎತ್ತಿ ತನ್ನಿ. ನನ್ನ ಕುರ್ಚಿ ನಾನು ತೆಗೆದುಕೊಂಡು ಬರುತ್ತೇನೆ ಎಂದು ತಮ್ಮ ಕುರ್ಚಿ ತಾವೇ ಕೈಯೊಳಗೆ ಹಿಡಿದುಕೊಂಡು ಹೊರಬಂದರು. ನಂತರ ಹೊರಗಡೆ ಸಭೆ ಜರುಗಿತು.

Share this article