ಮದ್ದೂರು ಕಂದಾಯ ಇಲಾಖೆಯ ವಿಎ ಹಾಗೂ ಆರ್ ಐಗಳು ಕೇಂದ್ರ ಸ್ಥಾನದಲ್ಲಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ಜನತಾ ದರ್ಶನದಲ್ಲಿ ಸ್ವೀಕೃತವಾದ ಕುಂದು ಕೊರತೆ ಅರ್ಜಿಗಳನ್ನು 15 ದಿನದೊಳಗಾಗಿ ವಿಲೇವಾರಿ ಮಾಡಬೇಕು. ತಮ್ಮ ವ್ಯಾಪ್ತಿಯಲ್ಲಿ ಆಗದಿದ್ದರೆ ಮೇಲಾಧಿಕಾರಿಗಳನ್ನು ಸಂಪರ್ಕಿಸಬೇಕು. ಅಲ್ಲಿಯೂ ಆಗದಿದ್ದರೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕು. ಈ ಹಂತದಲ್ಲೂ ಕೆಲಸವಾಗದಿದ್ದಲ್ಲಿ ನನ್ನ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.
ಕೊಪ್ಪ ಹೋಬಳಿಗೆ ಸಂಬಂಧಿಸಿದಂತೆ 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನರ ಕುಂದು ಕೊರತೆಗಳನ್ನು ಪರಿಹರಿಸಲು ಇಂದು ಜನತಾ ದರ್ಶನ ಆಯೋಜಿಸಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಜನರ ಸಮಸ್ಯೆಗಳನ್ನು ನಿವಾರಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.ಕೊಪ್ಪ ಭಾಗದ ಜನರು ಆಧಾರ್ ತಿದ್ದುಪಡಿ ಹಾಗೂ ನೊಂದಣಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ಕೊಪ್ಪದಲ್ಲಿ ಹೊಸ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೊಪ್ಪ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ ಯೋಜನೆ ಸಂಬಂಧ ಮೃತರ ಪಟ್ಟಿಯೊಂದಿಗೆ ಮನೆ ಮನೆಗೆ ಭೇಟಿ ನೀಡಿ ವಾರಸುದಾರರಿಂದ 658 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವರಿಗೆ ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು.
ಬೆಳೆ ವಿಮೆ ಯೋಜನೆಯಡಿ 53,000 ರೈತರ ಹೆಸರು ನೊಂದಾಯಿಸಿದ್ದು, ಸರ್ಕಾರ 1500 ಕೋಟಿ ಹಾಗೂ ರೈತರು 50 ಕೋಟಿ ವಿಮೆ ಕಂಪನಿಗೆ ಪಾವತಿಸಿದೆ. ಮಳೆಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 9,438ರು ಗಳಂತೆ ಮದ್ದೂರು ತಾಲೂಕಿನಲ್ಲಿ 103 ಲಕ್ಷ ಹಾಗೂ ರಾಜ್ಯಾದ್ಯಂತ 230 ಕೋಟಿ ರು. ಗಳನ್ನು ಪಾವತಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಗ್ರಾಪಂ ಅಧ್ಯಕ್ಷ ನವೀನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ಎಸ್ .ವಿ.ಅಶೋಕ್ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರಿದ್ದರು.
ಜನತಾ ದರ್ಶನದಲ್ಲಿ ಒಟ್ಟು 84 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ 48, ಗ್ರಾಮೀಣಾಭಿವೃದ್ಧಿ 9, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ - 1, ಕೆಎಸ್ ಆರ್ ಟಿಸಿ 2, ಭೂ ಸ್ವಾಧೀನ ಇಲಾಖೆ 11, ಆರೋಗ್ಯ ಇಲಾಖೆ 2, ಲೋಕೋಪಯೋಗಿ ಇಲಾಖೆ 5, ಕೆಇಬಿ 2, ಆಹಾರ ಮತ್ತು ನಾಗರಿಕ ಸರಬರಾಜು 1, ಕೃಷಿ 2, ಹಿಂದುಳಿದ ವರ್ಗಗಳ ಇಲಾಖೆ 1 ಅರ್ಜಿಯನ್ನು ಸ್ವೀಕರಿಸಲಾಯಿತು.-----------