ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ವೇದಿಕೆ

KannadaprabhaNewsNetwork |  
Published : Nov 19, 2023, 01:30 AM IST
ʼಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿ ಮಕ್ಕಳಿಗೆ ವೇದಿಕೆʼ | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಭಿಪ್ರಾಯಪಟ್ಟರು

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟಿಸಿ ಶಾಸಕ ಗಣೇಶ್‌ ಹೇಳಿಕೆ । ತರಬೇತಿ ಕೇಂದ್ರ, ಗಾರ್ಮೆಂಟ್ಸ್‌ ಭರವಸೆಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ನಾನು ಬಂದಾಗ ಮಕ್ಕಳು ವೇಷ, ಭೂಷಣಗಳ ತೊಟ್ಟು ಸ್ವಾಗತಿಸಿದ್ದು ಖುಷಿ ಬಹಳ ಆಯಿತು. ಗ್ರಾಮೀಣ ಶಾಲೆಗಳಲ್ಲಿ ಓದಿದವರೇ ದೇಶ, ರಾಜ್ಯದಲ್ಲಿ ಗಣ್ಯರಾಗಿದ್ದಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಗ್ರಾಮೀಣ ಶಾಲೆಯಲ್ಲಿ ಓದಿದೆವು ಎಂದು ಹೇಳಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿಯಾದ ಸಮಯದಲ್ಲಿ ಶಿಕ್ಷಕರ ಕುರಿತು ಮಾತನಾಡಿದ್ದೇನೆ. ಅತಿಥಿ ಶಿಕ್ಷಕರ ನೇಮಕದ ಸಮಯದಲ್ಲಿ ಜಿಲ್ಲೆಗೆ ಹೆಚ್ಚಿನ ಅತಿಥಿ ಶಿಕ್ಷಕರು ಬಂದರೂ ಗುಂಡ್ಲುಪೇಟೆಗೆ ಹೆಚ್ಚು ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕೊಟ್ಟಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವೇ ಶಾಲಾ ಮಕ್ಕಳಲ್ಲಿ ಇರುವ ಪ್ರತಿಭೆ ಹೊರ ತರುವ ಕೆಲಸವಾಗಿದೆ.ಮಕ್ಕಳಿಗೆ ಪ್ರತಿಭಾ ಕಾರಂಜಿ ಅಡಿಪಾಯ ಇದ್ದಂತೆ ಎಂದರು.

ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ರಾಮಚಂದ್ರ ರಾಜೇ ಅರಸ್‌, ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಸಾದ್‌, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಗುರುಪ್ರಸಾದ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿವಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷೆ ಅನ್ನಪೂರ್ಣ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ.ಎಚ್.ಟಿ.ಸರೋಜ, ಶಿಕ್ಷಕರಾದ ಮಹೇಶ್‌, ಶಿವಯ್ಯ, ಸುಮ, ಮಹೇಶ್‌, ಪ್ರಕಾಶ್‌, ಶಾಂತಮಲ್ಲೇಶ್‌ ಸೇರಿದಂತೆ ನೂರಾರು ಮಕ್ಕಳಿದ್ದರು.

ಸ್ಪರ್ಧಾತ್ಮಕ ತರಬೇತಿ ಕೇಂದ್ರ, ಗಾರ್ಮೆಂಟ್ಸ್‌ಗೆ ಚಿಂತನೆ

ತಾಲೂಕು ಕೇಂದ್ರ ಗುಂಡ್ಲುಪೇಟೆಯಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಲು ಗಾರ್ಮೆಂಟ್‌ ತೆರೆಯುವ ಚಿಂತನೆಯಿದೆ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.

ಓದಿದವರಿಗೆಲ್ಲ ಉದ್ಯೋಗ ಸಿಗುತ್ತಿಲ್ಲ. ಕಂಪ್ಯೂಟರೀಕರಣದಿಂದ ಜನರಿಗೆ ಉದ್ಯೋಗ ಕಡಿಮೆ ಆಗುತ್ತಿದೆ. ಇದನ್ನು ಮನಗಂಡು ತಾಲೂಕಿನಲ್ಲಿ ಮಹಿಳೆಯರಿಗಾಗಿ ಸದ್ಯಕ್ಕೀಗ ಗಾರ್ಮೆಂಟ್‌ ಆರಂಭಿಸಲು ಒಬ್ಬ ಉದ್ಯಮಿ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.

ಅಲ್ಲದೆ ಕಾಂಪೀಟೇಶನ್‌ನಲ್ಲಿ ಓದುವ ಕೆಲಸ ಮಾಡಬೇಡಿ ನಿಮ್ಮ ಜ್ಞಾನಕ್ಕೆ ತಕ್ಕಂತೆ ಅಥವಾ ನಿಮ್ಮ ಪ್ರತಿಭೆಗೆ ತಕ್ಕಂತೆ ಓದಬೇಕು ಎಂಬುದು ನನ್ನ ಬಯಕೆ. ಹಾಗಾಗಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆಯಲು ಸಹ ಚಿಂತನೆ ನಡೆಸಿದ್ದೇನೆ ಎಂದರು.

ಮುಂಬರುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುವ ಮೂಲಕ ತಾಲೂಕಿಗೆ ಹೆಸರು ತರುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.

ಗುಂಡ್ಲುಪೇಟೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ