ಕಟೀಲಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆದ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ ಶ್ರೀಮಂತ ಕಲೆ ಯಕ್ಷಗಾನದ ಕಲಾವಿದರ ತ್ಯಾಗ ಶ್ರಮ ಸದಾ ಅಭಿನಂದನೀಯ. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆದ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಯಕ್ಷಶಾಲ್ಮಲಾ ಸಂಸ್ಥೆಗೆ ಹಾಗೂ 22 ಮಂದಿ ಯಕ್ಷಗಾನ ರಂಗದಲ್ಲಿ ಅನನ್ಯ ಸಾಧನೆಗೈದ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯಕುಮಾರ್ ಮುದ್ರಾಡಿಗೆ ಯಕ್ಷಚೇತನ ಪ್ರಶಸ್ತಿ, ಚಿದಂಬರಬಾಬು ಕೋಣಂದೂರು, ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ಧಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ್, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ಧಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ, ಗುಂಡಿಮಜಲು ಗೋಪಾಲ ಭಟ್, ಇಡುವಾಣಿ ತ್ರ್ಯಂಬಕ ಹೆಗಡೆ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಕಾಯರ್ತಡ್ಕ ವಸಂತ ಗೌಡ, ಶ್ರೀಧರ ಪಂಜಾಜೆ ಇವರಿಗೆ 20 ಸಾವಿರ ರು. ಹಾಗೂ ಫಲಕ ನೀಡಿ ಸನ್ಮಾನಿಸಲಾಯಿತು.

ಶ್ರೀ ಸ್ವರ್ಣವಲ್ಲೀ ಮಠದ ಕೃಪಾಶ್ರಯದ ಯಕ್ಷಶಾಲ್ಮಲಾ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ 50 ಸಾವಿರ ರು. ಮತ್ತು ಫಲಕ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ನಿಧನರಾದ ಸಿಗಂದೂರು ಮೇಳದ ಭಾಗವತ ರಾಮಚಂದ್ರ ನಾಯಕ್ ಅವರ ಕುಟುಂಬಕ್ಕೆ 50 ಸಾವಿರ ರು. ಸಾಂತ್ವ ನಿಧಿ ನೀಡಲಾಯಿತು.

ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ. ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟರನ್ನು ಗೌರವಿಸಲಾಯಿತು.

ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ, ಲೀಲಾಕ್ಷ ಕರ್ಕೇರ, ಎಂ.ಕೆ.ಭಟ್. ಕೆ.ಸದಾಶಿವ ಭಟ್ ಮತ್ತಿತರರಿದ್ದರು. ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವಾಗತಿಸಿ ನಿರೂಪಿಸಿದರು.ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ ಬಡಗುತಿಟ್ಟು ಯಕ್ಷಗಾನ, ಯಕ್ಷಗಾನ ರಾಗ ಸಂಯೋಗ ತೆಂಕುಬಡಗು ಕರ್ನಾಟಕ ಶಾಸ್ತ್ರಿಯ ಸಂಗೀತ ಸಮಾನ ಸಾಹಿತ್ಯವರಾಗ ಪ್ರಸ್ತುತಿ ಹಾಗೂ ತೆಂಕುತಿಟ್ಟಿನ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ರೂಪಕ ಶ್ರೀ ಮನೋಹರ ಸ್ವಾಮಿ ಪರಾಕು ಪ್ರದರ್ಶನಗೊಂಡಿತು.

Share this article