ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಈಗ ಎಲ್ಲಿ ನೋಡಿದರಲ್ಲಿ ಕ್ರಿಕೆಟ್ ಜ್ವರ ಆರಂಭವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಯಾರಿಗೆ ಕೇಳಿದರೂ ಅವರ ಬಾಯಲ್ಲಿ ಕ್ರಿಕೆಟ್... ಕ್ರಿಕೆಟ್...!ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸತತವಾಗಿ 10 ಪಂದ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿರುವ ಭಾರತ ತಂಡದ ಮೇಲೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಈ ಬಾರಿ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾನಗರದೆಲ್ಲೆಡೆಯೂ ಈಗ ಈ ಪಂದ್ಯದ ವೀಕ್ಷಣೆಗೆ ಹಲವೆಡೆ ಸಿದ್ಧತೆ ನಡೆಸಿರುವುದು ಶನಿವಾರ ಕಂಡುಬಂದಿತು.
ಭಾನುವಾರ ಭಾರತ- ಆಸ್ಟ್ರೇಲಿಯಾ ನಡುವೆ ನಡೆಯುವ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಮಹಾನಗರದಲ್ಲಿ ಹಲವೆಡೆ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಕ್ರಿಕೆಟ್ ಪ್ರೇಮಿಗಳು ಭಾನುವಾರ ನಗರದ ಸಿದ್ಧಾರೂಢರ ಮಠ, ಮೂರುಸಾವಿರ ಮಠ, ಹಳೇ ಕೋರ್ಟ್ ವೃತ್ತದ ಬಳಿ ಇರುವ ಸಾಯಿಬಾಬಾ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ.ಶಾಲಾ ಮಕ್ಕಳಿಂದಲೂ ಪ್ರಾರ್ಥನೆ:
ನಗರದ ಎನ್.ಕೆ. ಟಕ್ಕರ್ ಪ್ರೌಢಶಾಲೆಯ ಹಾಗೂ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ನಗರದ ಜಿಮಖಾನಾ ಮೈದಾನದಲ್ಲಿ ಸೇರಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ರಾಷ್ಟ್ರಧ್ವಜ ಹಿಡಿದು ಪ್ರಾರ್ಥಿಸಿದರು.ಇವರೊಂದಿಗೆ ಪ್ರೌಢಶಾಲೆಯ ಇಲಾಖೆ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಸುಮಂಗಲಾ ಡಂಗನವರ ಹಾಗೂ ಪ್ರತೀಕ್ಷಾ ಅಗಸಿಬಾಗಿಲ ವಿದ್ಯಾರ್ಥಿನಿಯರು ಕ್ರಿಕೆಟ್ ಆಡುವ ಮೂಲಕ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭಾವಚಿತ್ರ ಹಿಡಿದು ಶುಭ ಹಾರೈಸಿದರು.
ಕ್ರಿಕೆಟ್ ಆಡಿ ಶುಭಕೋರಿದ ಶಾಸಕ:ಶನಿವಾರ ಬೆಳ್ಳಂಬೆಳಗ್ಗೆ ಇಲ್ಲಿನ ನೆಹರು ಮೈದಾನಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಭಾನುವಾರದ ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದೆ. ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದೆ. ಈಗಾಗಲೇ ಸತತ 10 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಫೈನಲ್ ಪಂದ್ಯದಲ್ಲೂ ಭಾರತ ಗೆಲ್ಲುತ್ತದೆ. ರೋಹಿತ್ ಶರ್ಮಾ ನೇತೃತ್ವದಲ್ಲಿನ ತಂಡ ಒಳ್ಳೆಯ ಆಟ ಆಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೋಳನಕೆರೆಯಲ್ಲೂ ಸಿದ್ಧತೆ:ನಗರದ ತೋಳನಕೆರೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಪ್ರಕೃತಿ ಫೌಂಡೇಶನ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಹಯೋಗದಲ್ಲಿ ಕ್ರಿಕೆಟ್ ವೀಕ್ಷಣೆಗೆ ಬೃಹತ್ ಪ್ರಮಾಣದ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವ ಕ್ರೀಡಾಪ್ರೇಮಿಗಳಿಗೆ ತೋಳನಕೆರೆಯ ಪ್ರವೇಶ ಉಚಿತವಾಗಿದೆ. ಆದರೆ, ಕ್ರಿಕೆಟ್ ವೀಕ್ಷಣೆಗೆ ₹100 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಪರಶುರಾಮ ಪೂಜಾರ ತಿಳಿಸಿದರು.
ಹೊಸೂರು ವೃತ್ತದ ಸಮೀಪವಿರುವ ಕ್ರೀಡಾಮೈದಾನದಲ್ಲಿ ಪಂದ್ಯವೀಕ್ಷಣೆಗೆ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ನಗರದ ಹಲವೆಡೆ ಎಲ್ಇಡಿ ಪರದೆ ವ್ಯವಸ್ಥೆಯ ಸಿದ್ಧತೆ ನಡೆಸಲಾಗಿದೆ.