ಆಫ್ರಿಕನ್ ದೇಶಗಳ ಬ್ಯಾಂಕ್‌ ಪ್ರತಿನಿಧಿಗಳ ಭೇಟಿ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಆಫ್ರಿಕಾ ಖಂಡದ ಉಗಾಂಡಾ, ಕೀನ್ಯಾ ಮತ್ತು ತಾಂಜಿನೀಯಾ ದೇಶಗಳ ಬ್ಯಾಂಕ್ ಪ್ರತಿನಿಧಿಗಳು ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಸಾಮಾಜಿಕ ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಧಾರವಾಡ

ಆಫ್ರಿಕಾ ಖಂಡದ ಉಗಾಂಡಾ, ಕೀನ್ಯಾ ಮತ್ತು ತಾಂಜಿನೀಯಾ ದೇಶಗಳ ಬ್ಯಾಂಕ್ ಪ್ರತಿನಿಧಿಗಳು ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಸಾಮಾಜಿಕ ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯ ಮಾಡಿಕೊಂಡರು.

ಉಗಾಂಡಾ, ಕೀನ್ಯಾ ಮತ್ತು ತಾಂಜಿನೀಯಾಗಳಲ್ಲಿ ಬ್ಯಾಂಕ್ ಸಾಲದ ಮೂಲಕ ಸೌರ ಶಕ್ತಿ ಅನುಷ್ಠಾನಕ್ಕೆ ಅಲ್ಲಿನ ಬ್ಯಾಂಕುಗಳು ಆಸಕ್ತಿ ವಹಿಸಿದ್ದು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾದರಿಯನ್ನು ಅನುಸರಿಸಲು ಇಲ್ಲಿಗೆ ಬಂದಿದ್ದೇವೆ ಎಂದು ನಿಯೋಗದ ಮುಖ್ಯಸ್ಥ ಕೀನ್ಯಾ ದೇಶದ ಇಕ್ವಿಟಿ ಗ್ರೂಪ್‌ನ ಸಹ ನಿರ್ದೇಶಕ ಎರಿಕ್‌ ಗೆನ್ಸನ್ ತಿಳಿಸಿದರು.

ಸೌರ ಶಕ್ತಿ ಅನುಷ್ಠಾನಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಅಭೂತಪೂರ್ವ ಕಾರ್ಯವನ್ನು ಮಾಡಿದೆ. ಬೆಳಕು, ವಾಟರ್ ಹೀಟರ್‌ ಅಲ್ಲದೆ ಇದೀಗ ಸಣ್ಣ ಉದ್ಯಮಶೀಲರಿಗೆ ಸೌರ ವಿದ್ಯುತ್ತನ್ನು ಬಳಸಿ ಆದಾಯ ತರಬಲ್ಲ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹಿಸುತ್ತಿದೆ. ಸೆಲ್ಕೋ ಸೋಲಾರ್ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಬ್ಯಾಂಕು ಸೌರ ವಿದ್ಯುತ್‌ ಆಧಾರಿತ 227 ಸ್ವಯಂ ಉದ್ಯೋಗ ಘಟಕಗಳಿಗೆ ₹1.17 ಕೋಟಿ ಸಾಲ ನೀಡಿದೆ. ಗ್ರಿಡ್ ವಿದ್ಯುತ್‌ ಇಲ್ಲದ ಕಡೆ ಇಂತಹ ಸೌರ ವಿದ್ಯುತ್‌ ಘಟಕ ಉದ್ಯೋಗ ನೀಡುವಲ್ಲಿ ಮತ್ತು ಜನಸಾಮಾನ್ಯರ ಬದುಕು ಪರಿವರ್ತನೆಯಲ್ಲಿ ಸಹಾಯಕವಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಪ್ರತಿನಿಧಿಗಳಿಗೆ ವಿವರಿಸಿದರು.

ಉಗಾಂಡದ ಗ್ರಾಮೀಣ ವಿದ್ಯುತ್ ಶಕ್ತಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವರಿಂಗಾ ಮಟಿನಂಡಿ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಕಾರ್ಯ ಅಧ್ಯಯನ ಯೋಗ್ಯವಾಗಿದೆ ಎಂದರು.

ತಾಂಜಿನಿಯಾದ ಇಕ್ವಿಟಿ ಬ್ಯಾಂಕಿನ ಮುಖ್ಯ ಪ್ರಬಂಧಕ ಮುಯಾಂಗೋ ಮಾರ್ಟಿನ್, ಉಗಾಂಡಾದ ಇಕ್ವಿಟಿ ಬ್ಯಾಂಕಿನ ಮುಖ್ಯಪ್ರಬಂಧಕಿ ಸ್ಸೆಮಕುಲ್ ನ್ಯಾಕೈರು, ಉಗಾಂಡದ ಇಕ್ವಿಟಿ ಗ್ರೂಪ್‌ನ ಹಿರಿಯ ಪ್ರಬಂಧಕಿ ಎಲಿಜಾಬೆತ್, ನಿಯೋಗದಲ್ಲಿದ್ದರು.

ನಂತರ ನಿಯೋಗ ಧಾರವಾಡ ಸೆಲ್ಕೋ ಸಂಸ್ಥೆಗೂ ಭೇಟಿ ನೀಡಿತು. ಈ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ ಹಿರಿಯ ಸಲಹೆಗಾರ ಅಶೋಕ ರೆಡ್ಡಿ, ಸೆಲ್ಕೋ ಸಂಸ್ಥೆಯ ಮಹಾ ಪ್ರಬಂಧಕ ಪ್ರಸನ್ನ ಹೆಗಡೆ, ಸೆಲ್ಕೋ ಫೌಂಡೇಶನ್‌ನ ಮುಖ್ಯಾಧಿಕಾರಿ ಸುರಭಿ ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article