ಕನ್ನಡಪ್ರಭ ವಾರ್ತೆ ಮಧುಗಿರಿ
ಐತಿಹಾಸಿಕ ಮಹತ್ವವುಳ್ಳ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಪ್ರಸನ್ನ ಪಾರ್ವತಿ ಮಲ್ಲೇಶ್ವರಸ್ವಾಮಿ ಹಾಗೂ ಲಕ್ಷೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳ ಮಧ್ಯ ಭಾಗದಲ್ಲಿರುವ ಜಾಗದ ಮಾಲೀಕರೊಂದಿಗೆ ಚರ್ಚಿಸಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಭರವಸೆ ನೀಡಿದರು.ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಉದ್ಭವ ಲಿಂಗಕ್ಕೆ ಮತ್ತು ಪಾರ್ವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತಮಂಡಳಿ ಪದಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದರು. ಈ ಜಾಗವನ್ನು ದೇಗುಲಗಳ ಅಬಿವೃದ್ಧಿಗೆ ನೀಡುವಂತೆ ಮನವರಿಕೆ ಮಾಡಿ, ದೇವಸ್ಥಾನದ ಹೆಸರಿಗೆ ಬದಲಾದ ನಂತರ ಪ್ರವಾಸಿಗರಿಗೆ ಅನುಕೂಲವಾಗುವ ರೀತಿ ಅಭಿವೃದ್ಧಿ ಪಡಿಸುವ ಕ್ರಿಯಾಯೋಜನೆ ಮಾಡಲಾಗುವುದು. ಈ ಸ್ಥಳದಲ್ಲಿ ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಗಣೇಶೋತ್ಸವ ಸಲುವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಲು ಅನುಕೂಲವಾಗಲಿದೆ ಎಂದರು.
ಮಲ್ಲೇಶ್ವರಸ್ವಾಮಿ ದೇಗುಲದ ಕಲ್ಲುಬಂಡೆ ಜರುಗಿರುವುದನ್ನು ವೀಕ್ಷಿಸಿದ ಆರ್.ರಾಜೇಂದ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ರಿಪೇರಿ ಮಾಡಿಸುವಂತೆ ಸೂಚಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂರಾಜು ಮಾತನಾಡಿ, ಹಿಂದೆ ಈ ಸ್ಥಳದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ವರಿಂದ ಸಮುದಾಯ ಭವನ ನಿರ್ಮಿಸಿ, ಬಡವರಿಗೆ ವಿವಾಹ ಇತರೆ ಶುಭ ಸಮಾರಂಭಗಳಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ನಡೆದಿತ್ತು. ಪುರಸಭೆಯಿಂದ ಶೌಚಾಲಯ ನಿರ್ಮಿಸಿದ್ದನ್ನು ಸ್ಮರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯರಾದ ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಎಂ.ಶ್ರೀಧರ್, ಎಂ.ಎಸ್.ಚಂದ್ರ ಶೇಖರಬಾಬು, ಮಾಜಿ ಸದಸ್ಯ ಆರ್‌ಎಲ್‌ಎಸ್ ರಮೇಶ್, ರವಿ, ಪಿಎಸ್‌ಐ ರವಿಕುಮಾರ್ ಭಕ್ತ ಮಂಡಳಿಯ ಕೆ.ವಿ.ಮಂಜುನಾಥ ಗುಪ್ತ. ದೋಲಿಬಾಬು, ಜಿ.ನಾರಾಯಣರಾಜು. ಎಸ್‌ಬಿಐ ಗೋಪಾಲ್, ಸುರೇಶ್, ಗಣೇಶ್, ಸುಬ್ಬಯ್ಯಶಟ್ಟಿ, ಜೋಡಿದಾರ್ ಮುರುಳೀಧರಸ್ವಾಮಿ, ಪ್ರಧಾನ ಅರ್ಚಕ ನಟರಾಜು, ದೀಕ್ಷಿತ್ ಅಕ್ಷ್ಯಯ, ಕೆ.ಎಸ್.ರಾಮಚಂದ್ರರಾವ್ ಇದ್ದರು.