- ನೂತನ ನ್ಯಾಯಾಧೀಶೆ ವೇಲಾ ದಾಮೋದರ ಖೋಡೆ ಸ್ವಾಗತ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲಾ ವಕೀಲರ ಸಂಘವು ಪ್ರಕರಣಗಳ ವಿಲೇವಾರಿಯಲ್ಲಿ ಲೋಕ್ ಅದಾಲತ್‌ನಲ್ಲಿ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇದು ಪ್ರಶಂಸನೀಯ ಎಂದು ನೂತನ ನ್ಯಾಯಾಧೀಶೆ ವೇಲಾ ದಾಮೋದರ ಖೋಡೆ ಹೇಳಿದರು.
ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ ಬಂದ ಹಿನ್ನೆಲೆ ವಕೀಲರ ಸಂಘದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಹಿಂದೆ ಕಾರ್ಯನಿರ್ವಹಿಸಿರುವ ಎಲ್ಲ ನ್ಯಾಯಾಧೀಶರು ಜಿಲ್ಲಾ ವಕೀಲರ ಸಂಘದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ನುಡಿದಿದ್ದಾರೆ. ವಕೀಲರ ಸಂಘವು 75ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಗೂ ಜಿಲ್ಲಾ ನ್ಯಾಯಾಲಯವು ಸ್ಥಾಪನೆಯಾದ 25 ವರ್ಷಗಳ ಸಂದರ್ಭದಲ್ಲಿ ಪ್ರಥಮವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ವಕೀಲರ ಸಂಘವು ಈ ಹಿಂದೆ ನ್ಯಾಯಾಲಯಗಳ ಸುಗಮ ಕಾರ್ಯನಿರ್ವಹಣೆಗೆ, ಪ್ರಕರಣಗಳ ವಿಲೇವಾರಿಗೆ ಮತ್ತು ಲೋಕ್ ಅದಾಲತ್‌ಗೆ ನೀಡಿದ ಸಹಕಾರವನ್ನು ನಮಗೂ ನೀಡಬೇಕೆಂದು ಮನವಿ ಮಾಡಿದರು. ನ್ಯಾಯಾಧೀಶರೂ ಸಹ ವಕೀಲರ ಸಂಘದೊಂದಿಗೆ ಸೌಹಾರ್ದವಾಗಿ ಇರಲು ಬದ್ಧರಾಗಿರುತ್ತೇವೆ ಎಂದ ಅವರು, ಪುಸ್ತಕ ನೀಡಿ ಸ್ವಾಗತಿಸಿದ್ದು ಮೆಚ್ಚುಗೆಯಾಯಿತು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ವಕೀಲರ ಸಂಘವು ಭವ್ಯ ಇತಿಹಾಸವನ್ನು ಹೊಂದಿದೆ. ಸಂಘದ ಸ್ಥಾಪಕ ಸದಸ್ಯರಾಗಿದ್ದ ಎಚ್.ಸಿದ್ಧವೀರಪ್ಪ ಅವರು ಭಾರತದ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದರು. ಸಂಘದ ಸದಸ್ಯರಾಗಿದ್ದ ಕೊಂಡಜ್ಜಿ ಬಸಪ್ಪ, ಎಚ್.ಶಿವಪ್ಪ ಮಂತ್ರಿಗಳಾಗಿ ಬಿ.ಜಿ. ಕೊಟ್ರಪ್ಪ, ಕೆ.ಆರ್. ಜಯದೇವಪ್ಪ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಜಿ.ಎಂ.ಕಲ್ಲಪ್ಪ, ಆರ್.ಸಿದ್ಧಪ್ಪನವರು ಭಾಗವಹಿಸಿದ ಹಿರಿಮೆ ನಮ್ಮದಾಗಿದೆ ಎಂದ ಅವರು, ಸಂಘವು ಸುಗಮ ನ್ಯಾಯಾಂಗ ವಿತರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿಮಠ್, ಚೌಡಪ್ಪ, ಸಂಘದ ಸದಸ್ಯರು ಭಾಗವಹಿಸಿದ್ದರು.- - - -17ಕೆಡಿವಿಜಿ45.ಜೆಪಿಜಿ:
ದಾವಣಗೆರೆಗೆ ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಆಗಮಿಸಿದ ವೇಲಾ ದಾಮೋದರ ಖೋಡೆ ಅವರಿಗೆ ಜಿಲ್ಲಾ ವಕೀಲರ ಸಂಘದಿಂದ ಪುಸ್ತಕ ನೀಡಿ ಸ್ವಾಗತಿಸಲಾಯಿತು.