ದೈವಜ್ಞ ಸಮಾಜದ ಬೇಡಿಕೆ ಈಡೇರಿಕೆಗೆ ಬದ್ಧ: ಶಾಸಕ ಯಾಸೀರಖಾನ್ ಪಠಾಣ

KannadaprabhaNewsNetwork | Published : Mar 24, 2025 12:35 AM

ಸಾರಾಂಶ

ದೈವಜ್ಞ ಸಮಾಜದ ಬೇಡಿಕೆಯಾದ ಗಣಪತಿ ದೇವಸ್ಥಾನ, ಸಮುದಾಯ ಭವನ, ಸಮಾಜದ ಬಡಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಎಂದು ಶಾಸಕ ಯಾಸೀರಖಾನ್ ಪಠಾಣ ಭರವಸೆ ನೀಡಿದರು.

ಶಿಗ್ಗಾಂವಿ: ಸಣ್ಣ ಸಣ್ಣ ಸಮಾಜವನ್ನು ನಿರ್ಲಕ್ಷಿಸಿಸದೇ ಅವುಗಳನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಶಾಸಕ ಯಾಸೀರಖಾನ್‌ ಪಠಾಣ ತಿಳಿಸಿದರು.ಪಟ್ಟಣದಲ್ಲಿ ದೈವಜ್ಞ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಣ್ಣ ಸಮಾಜಗಳ ಸಣ್ಣಪುಟ್ಟ ಬೇಡಿಕೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ. ಸಣ್ಣ ಸಮಾಜದ ಅಶೀರ್ವಾದ ಕಳೆದ ಉಪಚುನಾವಣೆ ಗೆಲ್ಲಲು ಅನುಕೂಲವಾಯಿತು. ದೈವಜ್ಞ ಸಮಾಜದ ಬೇಡಿಕೆಯಾದ ಗಣಪತಿ ದೇವಸ್ಥಾನ, ಸಮುದಾಯ ಭವನ, ಸಮಾಜದ ಬಡಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.ಸರಾಫ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಲನಕರ ಮಾತನಾಡಿ, ರಾಜಕೀಯ ಪ್ರತಿನಿಧಿಗಳು ಚುನಾವಣೆ ಬಂದಾಗ ಸಮಾಜಗಳಿಗೆ ಭರವಸೆ ನೀಡುತ್ತಾರೆ, ನಂತರ ನಮ್ಮನ್ನು ಕಡೆಗಣಿಸುತ್ತಾರೆ ಎಂದರು.ತಾಲೂಕು ಅಧ್ಯಕ್ಷ ಸುಧಾಕರ ದೈವಜ್ಞ ಮಾತನಾಡಿ, ಸಣ್ಣ ಸಣ್ಣ ಸಮಾಜದ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಅಲ್ಲದೇ ದೈವಜ್ಞ ಸಮಾಜವನ್ನು ಕಡೆಗಣಿಸಿದ್ದಾರೆ. ಆದರೆ ಶಾಸಕ ಯಾಸೀರಖಾನ ಪಠಾಣ ಅವರು ಬೇಡಿಕೆ ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಪುರಸಭೆ ಸದಸ್ಯ ಗೌಸಖಾನ ಮುನಶಿ, ವಿನಾಯಕ ರಾಯ್ಕರ, ಪ್ರಕಾಶ ಪಾಲನಕರ, ಭೂದಾನಿ ಸಂಕೇತ ರಾಯ್ಕರ, ರವಿ ರಾಯ್ಕರ, ಮಂಜುನಾಥ ವೇರ್ಣೇಕರ, ಆನಂದ ವೇರ್ಣೇಕರ, ಭೂಷಣ ರೇವಣಕರ, ಸಂತೋಷ ರಾಯ್ಕರ, ಮುನ್ನಾ ಮಾಲ್ದಾರ, ಸಾಧಿಕ ಮಲ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇಂದಿನಿಂದ ಮೆಳ್ಳಾಗಟ್ಟಿ ದ್ಯಾಮವ್ವದೇವಿ ಜಾತ್ರೆ

ಸವಣೂರು: ತಾಲೂಕಿನ ಮೆಳ್ಳಾಗಟ್ಟಿ (ಪ್ಲಾಟ್) ಗ್ರಾಮದಲ್ಲಿ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಮಾ. 24ರಿಂದ ಮಾ. 27ರ ವರೆಗೆ ಜರುಗಲಿದೆ.

ಮಾ. 24ರಂದು ಪ್ರಾಥಃಕಾಲ ವಿವಿಧ ಧಾರ್ಮಿಕ ಕೈಂಕರ್ಯ, ಹೋಮ, ಪೂಜೆ ಕೈಗೊಳ್ಳಲಾಗುವುದು. ಸಂಜೆ ಪುರಾಣ ಮಂಗಲ, ಬಸವರಾಜ ಹಡಗಲಿ, ಹುಲಿಗೆವ್ವ ಹಂದ್ರಾಳ ಹಾಗೂ ಸಂಗಡಿಗರಿಂದ ಗೀಗಿ ಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.ಮಾ. 25ರಂದು ಪ್ರಾಥಃಕಾಲ ದೇವಗಿರಿ ಹಾಗೂ ಮೆಳ್ಳಾಗಟ್ಟಿ ಗ್ರಾಮಸ್ಥರಿಂದ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ ಗ್ರಾಮದೇವಿ ಶ್ರೀದ್ಯಾಮವ್ವದೇವಿ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಚೌತಮನೆಕಟ್ಟೆಗೆ ಸಂಪನ್ನಗೊಂಡು, ಸ್ಥಾಪಿತಗೊಳಿಸಲಾಗುವುದು.ಮಾ. 26ರಂದು ಸಂಜೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಚೌತಮನೆಕಟ್ಟೆಯಿಂದ ಆರಂಭಗೊಳ್ಳುವ ಶ್ರೀದೇವಿ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನಕ್ಕೆ ಸಂಪನ್ನಗೊಂಡು, ದೇವಸ್ಥಾನದಲ್ಲಿ ಸ್ಥಾಪಿತಗೊಳಿಸುವ ದೇವತಾ ಕಾರ್ಯ ಕೈಗೊಳ್ಳಲಾಗುವುದು.ಮಾ. 27ರಂದು ರಾತ್ರಿ 10 ಗಂಟೆಗೆ ತಾಲೂಕಿನ ತೊಂಡೂರ ಗ್ರಾಮದ ಕಲಾವಿದರಿಂದ ವೀರಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನ ಜರುಗಲಿದೆ. ಗಂಗಾಧರಯ್ಯ ಹಿರೇಮಠ ನೇತೃತ್ವ ವಹಿಸುವರು. ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹೆಸ್ಕಾಂ ಅಧ್ಯಕ್ಷ ಸೈಯದ ಅಜೀಮಪೀರ್‌ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಶಾಸಕ ಯಾಸೀರ ಅಹ್ಮದಖಾನ್ ಪಠಾಣ, ಯುವ ಮುಖಂಡ ಭರತ ಬೊಮ್ಮಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ರಾಪಂ ಅಧ್ಯಕ್ಷ ಸಂಗನಗೌಡ ಹೊಂಬರಡಿ ಹಾಗೂ ಇತರರು ಪಾಲ್ಗೊಳ್ಳುವರು.

Share this article