ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿ ಜಾರಿಗೆ ಬದ್ಧ: ಸಿಎಂ

KannadaprabhaNewsNetwork |  
Published : Aug 08, 2026, 02:00 AM IST
ಸಿಎಂ ಡಿಕೆಶಿ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸಿರುವ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು(ಜಾತಿಗಣತಿ) ಜಾರಿಗೆ ತಂದು ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಡೀ ದೇಶದಲ್ಲಿ ಜಾತಿಗಣತಿ ನಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸಿರುವ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು(ಜಾತಿಗಣತಿ) ಜಾರಿಗೆ ತಂದು ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಡೀ ದೇಶದಲ್ಲಿ ಜಾತಿಗಣತಿ ನಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಒಬಿಸಿ ಮಹಾಸಂಘದ 11ನೇ ರಾಷ್ಟ್ರೀಯ ಮಹಾ ಸಮಾವೇಶ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈ ಜಾತಿ ಗಣತಿ ನಡೆಸಲು ಬದ್ಧರಾಗಿದ್ದಾರೆ. ಸಮಾಜದ ಎಲ್ಲ ವರ್ಗಕ್ಕೂ ಸಮಾನ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿ ಜಾರಿಗೊಳಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

ರಾಷ್ಟ್ರಾದ್ಯಂತ ರವಾನಿಸಬೇಕು:

ರಾಜ್ಯ ಸಚಿವ ಸಂಪುಟದಲ್ಲಿ ಮೂರನೇ ಎರಡು ಭಾಗದಷ್ಟು ಸಚಿವರು ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಧ್ವನಿಗೆ ಸ್ಪಂದಿಸುವ ಸರ್ಕಾರವಿದೆ ಎಂಬ ಸಂದೇಶವನ್ನು ರಾಷ್ಟ್ರಾದ್ಯಂತ ರವಾನಿಸಬೇಕು. ರಾಷ್ಟ್ರಮಟ್ಟದಲ್ಲಿ ನಿಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಬೇಕಾದರೆ ನಮ್ಮ ಪಕ್ಷದ ಪರ ನಿಲ್ಲಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸಂವಿಧಾನ ನೀಡಿದ್ದು, ನೆಹರೂ ಅವರ ಕಾಲದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಎಲ್ಲಾ ವರ್ಗದವರ ರಕ್ಷಣೆ ಮಾಡಲಾಗಿದೆ. ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೇ ಒಬಿಸಿ ಮೀಸಲಾತಿ ನೀಡಲಾಗಿತ್ತು. ಡಾ.ಮನೋಹನಸಿಂಗ್‌ ಅವರ ಅವಧಿಯಲ್ಲಿ ಆರ್‌ಇಟಿಯಂಥ ಕಾಯ್ದೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತರಿ ಯೋಜನೆ ನೀಡಲಾಯಿತು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲೂ ನಾವು ಮೀಸಲಾತಿ ನೀಡುತ್ತಿದ್ದೇವೆ ದೇಶದಲ್ಲಿ ಜಾತಿ ಗಣತಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಮನೆ ಮನೆ ಜನಗಣತಿಗೆ ಮುಂದಾಗಿದೆ. ಜಾತಿಗಣತಿ ಮೂಲಕ ಅಂತರವನ್ನು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಗ್ಯಾರಂಟಿಗಳಿಂದ ಆರ್ಥಿಕ ಸುಧಾರಣೆ:

ನಾವು ಅಧಿಕಾರಕ್ಕೆ ಬರುವ ಮುನ್ನ ತಾವು ಹಾಗೂ ಸಿದ್ದರಾಮಯ್ಯ ಅವರು ಜನರಿಗೆ ಬೆಲೆ ಏರಿಕೆಯಿಂದ ರಕ್ಷಣೆ ನೀಡುವ ಭರವಸೆ ನೀಡಿದೆವು. ಅದರಂತೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಜಾರಿ ಮಾಡಿದ್ದು, ಪ್ರತಿ ವರ್ಷ 52 ಸಾವಿರ ಕೋಟಿ ನೀಡುತ್ತಿದ್ದೇವೆ. ಆರಂಭದಲ್ಲಿ ಗ್ಯಾರಂಟಿಗಳನ್ನು ನೋಡಿ ಎಲ್ಲರೂ ನಗುತ್ತಿದ್ದರು. ಪ್ರಧಾನಿಗಳು ಈ ಯೋಜನೆಗಳ ಜಾರಿ ಅಸಾಧ್ಯ, ರಾಜ್ಯ ದಿವಾಳಿ ಆಗುತ್ತದೆ ಎಂದರು. ಆದರೆ, ಇವುಗಳನ್ನು ಯಶಸ್ವಿ ಅನುಷ್ಠಾನ ಮಾಡಲಾಗಿದೆ, ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳೂ ನಿಂತಿಲ್ಲ. ಗ್ಯಾರಂಟಿಗಳಿಂದ ಜನಸಾಮಾನ್ಯರ ಆರ್ಥಿಕ ಶಕ್ತಿ ಹೆಚ್ಚಾಗಿದೆ. ತಲಾ ಆದಾಯ ಇಡೀ ದೇಶದಲ್ಲೇ ನಂ.1 ಆಗುವಂತೆ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ.ರೇವಣ್ಣ, ರಾಷ್ಟ್ರೀಯ ಒಬಿಸಿ ಮಹಾಸಂಘದ ಅಧ್ಯಕ್ಷ ಡಾ.ಒಬನ್‌ ರಾವ್‌ ತಯ್ವಾಡೆ, ಮಹಾಸಂಘದ ರಾಜ್ಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕುರ್ರಾ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮಹಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸಚಿವರಿಂದ ಬರ ಪರಿಸ್ಥಿತಿ ಅವಲೋಕನ
ಮಕ್ಕಳ ಸಹಾಯವಾಣಿ ಸಿಬ್ಬಂದಿಗಿಲ್ಲ 10 ತಿಂಗಳಿಂದ ವೇತನ