ಕನ್ನಡಪ್ರಭ ವಾರ್ತೆ ಸಿಂಧನೂರು (ರಾಯಚೂರು)
ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ಶನಿವಾರ ತಿಮ್ಮಾಪುರ ಏತ ನೀರಾವರಿ ಯೊಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನೀರಿನ ಲಭ್ಯತೆ ಇದ್ದಾಗ ಅದನ್ನು ಕೃಷಿ ಉಪಯೋಗಕ್ಕೆ ಕಲ್ಪಿಸಿ ರೈತರನ್ನು ಮೇಲ್ದರ್ಜೆಗೇರಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ. ತಿಮ್ಮಾಪುರ ಏತ ನೀರಾವರಿ ಜಾರಿಗೆ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಸಾಕಷ್ಟು ಒತ್ತಾಯಿಸಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ₹ 90.06 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಿದ್ದು, 1.85 ಟಿಎಂಸಿ ನೀರು ಕೃಷಿ ಲಭ್ಯವಾಗಲಿದೆ. ಇದರಿಂದ 27 ಸಾವಿರ ಎಕರೆ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಏತ ನೀರಾವರಿ ವ್ಯಾಪ್ತಿಯಲ್ಲಿ ಶೇ.90ರಷ್ಟು ಜನ ಹಿಂದುಳಿದ ವರ್ಗಗಳ ಜನರೇ ವಾಸಿಸುತ್ತಿದ್ದು, ಅವರಿಗೆ ಅನುಕೂಲವಾಗಲಿದೆ ಎಂದಿ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ಸಂಗ್ರಹಗೊಂಡಿದ್ದು, ಸಾಕಷ್ಟು ನೀರು ಆಂಧ್ರಕ್ಕೆ ಹರಿದು ಹೋಗುತ್ತಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಜೆಟ್ ನಂತರ ಈ ಕುರಿತು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಜತೆ ಚರ್ಚಿಸಲಾಗುವುದು ಎಂದರು.ಕರ್ನಾಟಕ ಸುವರ್ಣ ಸಂಭ್ರಮವನ್ನು ಕಳೆದ ವರ್ಷವೇ ಮಾಡಬೇಕಿತ್ತು. ಆದರೆ, ಹಿಂದಿನ ಸರ್ಕಾರ ಮಾಡಲಿಲ್ಲ. ನಮ್ಮ ಸರ್ಕಾರ ಈ ವರ್ಷ ಅದ್ಧೂರಿಯಾಗಿ ಆಚರಿಸುತ್ತಿದೆ. 2024 ರ ನವೆಂಬರ್ ವರೆಗೆ ಅದ್ಧೂರಿಯಾಗಿ ಆಚರಿಸಲು ಆದೇಶ ಮಾಡಲಾಗಿದೆ. ಸಿಂಧನೂರಿನ ಸರ್ಕಾರಿ ಪದವಿ ಕಾಲೇಜ್ ಸುವರ್ಣ ಸಂಭ್ರಮ ಆಚರಿಸುತ್ತಿರುವುದು ಖುಷಿಯ ವಿಚಾರ ಎಂದರು.
ನಮ್ಮದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್:ಸಿಎಂ
ಎಲ್ಲ ಶಾಸಕರು ಕ್ರಿಯಾಶೀಲರಾಗಿದ್ದುಕೊಂಡು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದರೆ ಇಡೀ ರಾಜ್ಯವೂ ಸಹ ಅಭಿವೃದ್ಧಿಯಾಗುತ್ತದೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಜ್ಜನ ಮತ್ತು ಅಭಿವೃದ್ಧಿ ಬಗ್ಗೆ ಹೆಚ್ಚು ಶ್ರಮಿಸುವ ಶಾಸಕರು. ಇವರಂತೆಯೇ ಎಲ್ಲಾ ಶಾಸಕರು ಶ್ರಮಿಸಿದರೆ ಇಡಿ ರಾಜ್ಯ ಮತ್ತು ಹೈದರಾಬಾದ್ ಕರ್ನಾಟಕ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.