ಶಿರಸಿ: ನಾನು ಎಲ್ಲಿಯೂ ಹಣ ಕಟ್ಟುವುದಿಲ್ಲ ಎಂದು ಹೇಳಿಲ್ಲ. ಟಿಎಸ್‌ಎಸ್‌ಗೆ ಹಣ ಸಂದಾಯ ಮಾಡಲು ಎಂದಿಗೂ ಬದ್ಧನಿದ್ದೇನೆ. ಸಂಸ್ಥೆಗೆ ನಷ್ಟ ತೋರಿಸಿ, ಹೆಸರು ಕೆಡಿಸುವುದು ಹೊಸ ಆಡಳಿತ ಮಂಡಳಿಯ ಉದ್ದೇಶ ಎಂದು ಟಿಎಸ್‌ಎಸ್‌ನ ಮಾಜಿ ಎಜಿಎಂ ಅನಿಲಕುಮಾರ ಮುಷ್ಟಗಿ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಸ್‌ಎಸ್‌ಗೆ ೧೯೮೦ರಲ್ಲಿ ದಿ. ಶ್ರೀಪಾದ ಹೆಗಡೆ ಕಡವೆ ನಿರ್ದೇಶನದಂತೆ ಅವರ ಸಹಾಯಕನಾಗಿ ಸೇವೆಗೆ ಆಯ್ಕೆಗೊಂಡು ಸುದೀರ್ಘ ಸುಮಾರು ೪೨ ವರ್ಷಗಳ ಸೇವೆ ಸಲ್ಲಿಸಿ, ನಂತರ ದಿನಗಳಲ್ಲಿ ಸಂಸ್ಥೆಯ ಅಡಕೆ ಮಾರಾಟ ವಿಭಾಗದಲ್ಲಿ ವಿಭಾಗೀಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದೇನೆ. ಅಂದಿನ ವಿದ್ಯಮಾನದಲ್ಲಿ ಅಡಕೆ ಬೆಲೆ ಅತ್ಯಂತ ಕೆಳಮಟ್ಟದಲ್ಲಿದ್ದರೂ ಆ ವಿಭಾಗದಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಹಗಲು ರಾತ್ರಿಯೆನ್ನದೇ ಶ್ರಮಿಸಿ, ಒಂದೇ ವರ್ಷದಲ್ಲಿ ಸುಮಾರು ₹೮ ಕೋಟಿಗೂ ಅಧಿಕ ಲಾಭ ಮಾಡಿ ಅದನ್ನು ನನ್ನ ಸೇವೆಯ ಮುಕ್ತಾಯದ ವರೆಗೂ ಕಾಯ್ದಿರಿಸಿಕೊಂಡು ಬಂದಿದ್ದೇನೆ ಎಂದರು.ನಿವೃತ್ತಿಯ ನಂತರ ಸ್ವಂತ ಉದ್ಯಮ ಪ್ರಾರಂಭಿಸಿದ್ದೇನೆ. ಕೃಷಿ ಜಮೀನು ಖರೀದಿ ಹಾಗೂ ಮಾರಾಟ ಸಲುವಾಗಿ ಟಿಎಸ್‌ಎಸ್‌ನಲ್ಲಿ ಸಾಲ ಪಡೆದಿದ್ದೇನೆ. ಆ ವ್ಯವಹಾರ ೨ ವರ್ಷ ಯಾವುದೇ ತೊಡಕುಗಳಿಲ್ಲದೇ ನಡೆಯುತ್ತ ಬಂದಿದೆ. ಕಾಲಕಾಲಕ್ಕೆ ಬಡ್ಡಿ ಮತ್ತು ಅಸಲು ಸೇರಿ ₹೧೩.೬೫ ಕೋಟಿ ನನ್ನ ಸಾಲಕ್ಕೆ ಮರುಪಾವತಿ ಮಾಡಿದ್ದೇನೆ. ಉಳಿದ ಬಾಕಿ ಮೊತ್ತವನ್ನು ನನ್ನ ಲೇಔಟ್ ನಿವೇಶನಗಳನ್ನು ಟಿಎಸ್‌ಎಸ್ ಮುಖಾಂತರ ಮಾರಾಟ ಮಾಡಿ ಬಂದ ಹಣದ ಶೇ. ೫೦ರಷ್ಟು ಮೊತ್ತವನ್ನು ನನ್ನ ಸಾಲದ ಮೊತ್ತಕ್ಕೆ ಜಮಾ ಮಾಡುವುದಾಗಿ ಹಾಗೂ ಮಾರಾಟದ ಮೊತ್ತದಲ್ಲಿ ಟಿಎಸ್‌ಎಸ್ ಸಂಸ್ಥೆಗೆ ಶೇ. ೩ರಷ್ಟು ರಾಯಲ್ಟಿಯನ್ನು ನೀಡುವ ಜಂಟಿ ಒಪ್ಪಂದವಿದೆ. ಆದರೂ ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧನೆಗಾಗಿ, ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದ ಈಗಿನ ಆಡಳಿತ ಮಂಡಳಿಯವರು ನನ್ನ ಸ್ವಾಧೀನದಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಕಾರವಾರದ ಉಪ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದರು.
ನಾನು ₹೪೪ ಕೋಟಿ ಮರು ಪಾವತಿ ಮಾಡಲು ತಯಾರಿದ್ದೇನೆ. ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂಸ್ಥೆ ಉಳಿಯಬೇಕು. ಅಧ್ಯಕ್ಷರ ಕುರ್ಚಿ ಶಾಶ್ವತವಲ್ಲ. ೪೨ ವರ್ಷ ಸಂಸ್ಥೆ ಕಟ್ಟಲು ಶ್ರಮ ವಹಿಸಿದ್ದೇನೆ. ಲಾಭದಲ್ಲಿರುವ ಸಂಸ್ಥೆಯನ್ನು ನಷ್ಟದಲ್ಲಿ ದೂರುವುದು ಎಷ್ಟರ ಮಟ್ಟಿಗೆ ಸರಿ? ₹೧೨೪ ಕೋಟಿ ನಷ್ಟ ತೋರಿಸಿದರೆ ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲ. ನಾನು ₹೪೪ ಕೋಟಿ ಸಾಲ ಪಡೆದಿರುವುದು ಅವ್ಯವಹಾರ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.