ಕೊಪ್ಪಳ: ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ರವಾನಿಸಲಾಗಿದೆ.
ಮತ್ತೊಂದು ಕಡೆ ಅಣುಸ್ಥಾವರದಿಂದ ವಿದ್ಯುತ್ ಉತ್ಪಾದನೆ ಯೋಜನೆ ಕೊಪ್ಪಳ ನಗರ ಹಾಗೂ ಜಿಲ್ಲೆಯ ಜನರ ಮೇಲೆ ಅಪಾಯದ ತೂಗುಕತ್ತಿ ನೇತಾಡುತ್ತಿದೆ. ಕೊಪ್ಪಳ ನಗರ ಪೂರ್ವಭಾಗದ ಕುವೆಂಪು ನಗರ, ಗವಿಮಠ, ಗವಿಶ್ರೀ ನಗರ, ಅಂಬೇಡ್ಕರ್ ನಗರ, ಹಮಾಲರ ಕಾಲನಿ, ನಿರ್ಮಿತಿ ಕೇಂದ್ರ, ಡಾಲರ್ಸ್ ಕಾಲನಿ, ಸಿದ್ಧೇಶ್ವರ ನಗರ, ಕಾಳಿದಾಸ ನಗರ, ಬೇಲ್ದಾರ ಕಾಲನಿ, ಬಿ.ಟಿ. ಪಾಟೀಲ ನಗರ, ಜೆ.ಪಿ. ಮಾರ್ಕೆಟ್, ದೇವರಾಜ ಅರಸ ಕಾಲನಿ, ಕವಲೂರ ಓಣಿ, ಬೆಳವಿನಾಳ, ಎಪಿಎಂಸಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಇನ್ನೂ ಮುಂತಾದ ನಗರದ ವಾರ್ಡ್‌ಗಳಲ್ಲಿ ಎಂಎಸ್‌ಪಿಎಲ್ ಮತ್ತು ಇತರ ಕಂಪನಿಗಳ ಧೂಳು, ಹೊಗೆ ಆವರಿಸಿ ಜನರ ಆರೋಗ್ಯಕ್ಕೆ ಆಪತ್ತನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಸೂರ್ಯಶಕ್ತಿ ಅಪಾರವಾಗಿದ್ದು, ವಿದ್ಯುತ್ ಉತ್ಪಾದನೆಗೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಬೇಕೆ ಹೊರತು ಮಾನವ, ಪರಿಸರ ವಿನಾಶಕಾರಿಯಾದ ಅಣುಸ್ಥಾವರ ಬೇಡ ಎಂದು ಮನವಿ ಮಾಡಿದ್ದಾರೆ.ಕೊಪ್ಪಳದಲ್ಲಿನ ಈ ವಿಸ್ತರಣೆ ಮತ್ತು ಸ್ಥಾಪನೆಯಿಂದ ಮುಂದಿನ ಪೀಳಿಗೆಗೆ ಇನ್ನಷ್ಟು ಅಪಾಯ ಎದುರಾಗಿದೆ. ಇಲ್ಲಿನ ನಗರ ಹಾಗೂ ಗ್ರಾಮೀಣ ಬಾಧಿತರು ಭಯಭೀತರಾಗಿದ್ದು ಪ್ರಸ್ತುತ ಎದುರಾಗಿರುವ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಿರುವ ಬಲ್ಡೋಟ ಎಂಎಸ್‌ಪಿಎಲ್ ವಿಸ್ತರಣೆ ಹಾಗೂ ಅಣುಸ್ಥಾವರ ಸ್ಥಾಪನೆ ನಿಲ್ಲಿಸಬೇಕು ಎಂದು ಜನಾಂದೋಲನಕ್ಕೆ ಸಮಿತಿ ಮುಂದಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂಎಸ್‌ಪಿಎಲ್ ವಿಸ್ತರಣೆ ಕೈಬಿಡಬೇಕು. ಈಗ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಹಾನಿ ತಡೆಗಟ್ಟಬೇಕು. ಅಲ್ಲದೇ ವಿದ್ಯುತ್ ಅಣುಸ್ಥಾವರ ಘಟಕವನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.
ಗಂಭೀರವಾಗಿ ಪರಿಗಣಿಸದೆ ಹೋದರೆ ಸರ್ಕಾರದ ಜನವಿರೋಧಿ ಈ ನೀತಿ ವಿರುದ್ಧ ಬೀದಿಗಿಳಿದು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.