ಬರ ಪರಿಹಾರ ಶೀಘ್ರ ನೀಡಲು ಬದ್ಧ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಬರದಿಂದ ಬೆಳೆ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ. ನಾವು ರೈತರ ಪರವಾಗಿದ್ದೇವೆ. ಶೀಘ್ರದಲ್ಲಿ ಪರಿಹಾರ ನೀಡಲು ಬದ್ಧ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ರೈತರೊಂದಿಗೆ ಸಭೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ

ಕನ್ನಡಪ್ರಭ ವಾರ್ತೆ ಹಾವೇರಿ

ಬರದಿಂದ ಬೆಳೆ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ. ನಾವು ರೈತರ ಪರವಾಗಿದ್ದೇವೆ. ಶೀಘ್ರದಲ್ಲಿ ಪರಿಹಾರ ನೀಡಲು ಬದ್ಧ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತರೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ನಮ್ಮ ಸರ್ಕಾರ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನೂ ಆರೇಳು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ನಿರ್ಧರಿಸಿದ್ದೇವೆ. ಸೆ.23ರಿಂದ ಕೇಂದ್ರ ಸಚಿವರ ಭೇಟಿಗೆ ಕಾಯುತ್ತಿದ್ದೇವೆ. ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಅವರೂ 10 ದಿನ ಕಾಲಾವಕಾಶ ಕೋರಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇವೆ. ಕೇಂದ್ರ ಸರ್ಕಾರದ ತೀರ್ಮಾನ ನೋಡೋಣ ಎಂದು ಸಿಎಂ ತಿಳಿಸಿದ್ದಾರೆ. ನಾವು ರೈತರ ಪರವಾಗಿದ್ದು, ಸ್ವಲ್ಪ ದಿನ ಸಹಕರಿಸಬೇಕು ಎಂದು ಹೇಳಿದರು.

ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮಧ್ಯಂತರ ಬರ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ₹126 ಕೋಟಿ ಮಧ್ಯಂತರ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಶುರುವಾಗಿದೆ. ಇನ್ನು ಮೂರು ನಾಲ್ಕು ದಿನದೊಳಗೆ ಎಲ್ಲ ರೈತರಿಗೆ ಪರಿಹಾರ ಮೊತ್ತ ಜಮಾ ಆಗಲಿದೆ ಎಂದು ಹೇಳಿದರು.

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸುವ ಕಾಳಜಿ ತೋರಿರಲಿಲ್ಲ. ನಿಮ್ಮ ಸರ್ಕಾರ ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಈ ಸಲ ಹೆಕ್ಟೇರ್‌ಗೆ ₹8500 ಪರಿಹಾರ ನೀಡುತ್ತಿದ್ದು, ಅಷ್ಟೇ ಮೊತ್ತವನ್ನು ರಾಜ್ಯ ಸರ್ಕಾರವೂ ಸೇರಿ ಪರಿಹಾರ ನೀಡಬೇಕು. ಇದರಲ್ಲಿ ಕಡಿಮೆ ಮಾಡಬಾರದು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕೊಡಬಾರದು ಎಂಬ ಸರ್ಕಾರದ ಆದೇಶ ಸರಿಯಲ್ಲ. ಸೋಲಾರ್‌ ಪಂಪ್‌ಸೆಟ್‌ ಹಾಕಿಕೊಳ್ಳುವುದು ರೈತರಿಗೆ ಹೊರೆಯಾಗಲಿದೆ. ಆದ್ದರಿಂದ ಆಯ್ಕೆಯನ್ನು ರೈತರಿಗೆ ಬಿಡಬೇಕು ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಒಂದೊಂದು ಸಕ್ಕರೆ ಕಾರ್ಖಾನೆಯವರು ಒಂದೊಂದು ದರ ನಿಗದಿ ಮಾಡುತ್ತಿದ್ದಾರೆ. ಇಳುವರಿ ಕಡಿಮೆ ತೋರಿಸುತ್ತಿದ್ದಾರೆ. ಕಬ್ಬು ಕಟಾವು ವಿಧಾನದಿಂದಲೂ ಇಳುವರಿ ಕಡಿಮೆ ಬರುತ್ತಿದೆ. ಅದಕ್ಕಾಗಿ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹500 ಪ್ರೋತ್ಸಾಹ ಧನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ರೈತರ ಸಮಸ್ಯೆಗೆ ನಾವು ಸ್ಪಂದಿಸುತ್ತಿದ್ದೇವೆ. ಆದರೆ, ನೀವು ನಮ್ಮನ್ನು ಮಾತ್ರ ಕೇಳುತ್ತಿದ್ದೀರಿ, ಸಂಸದರನ್ನೂ ಈ ಬಗ್ಗೆ ಒತ್ತಾಯಿಸಬೇಕು. ರೈತರು ಕಬ್ಬನ್ನು ತಮಗೆ ಬೇಕಾದ ಕಾರ್ಖಾನೆಗೆ ಪೂರೈಕೆ ಮಾಡಲು ಅವಕಾಶವಿದೆ. ಚಿಕ್ಕದಾಗಿ ಕಬ್ಬು ತುಂಡರಿಸುವ ವಿಧಾನದಿಂದ ಇಳುವರಿ ಕಡಿಮೆಯಾಗುತ್ತಿದ್ದರೆ ಅದನ್ನು ಬಿಡುವಂತೆ ಹೇಳಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ರೈತ ಮುಖಂಡರಾದ ಗಂಗಣ್ಣ ಎಲಿ, ರುದ್ರಗೌಡ ಕಾಡನಗೌಡ್ರ, ಮರಿಗೌಡ್ರ ಪಾಟಿಲ್‌, ದಿಳ್ಳೆಪ್ಪ ಮಣ್ಣೂರ, ಶಿವಬಸಪ್ಪ ಗೋವಿ, ಸುರೇಶ್ ಚಲವಾದಿ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪೂಜಾರ ಇತರರು ಇದ್ದರು.

Share this article