ಮುಂಡಗೋಡ:
ಪ್ರತಿಯೊಬ್ಬರು ಬೇರೆ ಬೇರೆ ಭಾಷೆ ಕಲಿಯುವುದು ಉತ್ತಮ ಬೆಳವಣಿಗೆ. ಆದರೆ ಕನ್ನಡ ಕಗ್ಗೊಲೆ ಮಾಡಿ ಅದರ ಸಮಾಧಿಯ ಮೇಲೆ ಇಂಗ್ಲಿಷ್ ಸೌಧ ಕಟ್ಟುವುದು ಸರಿಯಲ್ಲ ಎಂದು ಹಿರಿಯ ಪತ್ರಕರ್ತ ಪಿ.ಎಸ್. ಸದಾನಂದ ಹೇಳಿದರು.ಪಟ್ಟಣದ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಾಲಾಜಿ ಮೆಲೋಡಿಸ್ ಹಾಗೂ ಮಾಸ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ರಸಮಂಜರಿ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ಕನ್ನಡ ಅಪಾಯಕ್ಕೊಳಗಾಗಿದ್ದು, ಗಂಡಾಂತರ ಬಂದೊದಗಿದೆ. ಕನ್ನಡದ ಘನತೆಗೆ ದಕ್ಕೆ ಉಂಟಾಗಿದೆ. ಇದಕ್ಕೆ ಹೊರಗಿನವರಾರು ಕಾರಣರಲ್ಲ, ಬದಲಾಗಿ ಕನ್ನಡಿಗರಾದ ನಾವೇ ಕಾರಣಿಕರ್ತರಾಗುತ್ತಿರುವುದು ವಿಪರ್ಯಾಸವೇ ಸರಿ. ಇಂದು ಕನ್ನಡದ ಮನಸ್ಸುಗಳು ವಾಣಿಜ್ಯಿಕರಣಗೊಂಡಿವೆ. ಅನ್ನ ರೊಟ್ಟಿ ನೀಡದ ಭಾಷೆ ಎಂಬ ಭಾವನೆ ಯುವಕರಲ್ಲಿ ಮೂಡಿದೆ ಎಂದರು.ಕನ್ನಡಿಗರೆಲ್ಲ ಕೇರಳ ಮತ್ತು ತಮಿಳುನಾಡು ಮಾದರಿಯಾಗಿ ತೆಗೆದುಕೊಳ್ಳಬೇಕಿದೆ. ಅಲ್ಲಿಯ ಮಾತೃಭಾಷೆ ಮಲಯಾಳಂ ಮತ್ತು ತಮಿಳು ಆ ರಾಜ್ಯದ ಪ್ರಧಾನ ಭಾಷೆಯನ್ನಾಗಿ ಮಾಡಿಕೊಳ್ಳಲಾಗಿದೆ. ಎಲ್ಲ ಭಾಷೆ ಕಲಿತರೂ ಕೂಡ ತಮ್ಮ ಭಾಷೆ ಮಾತ್ರ ಬಿಟ್ಟು ಕೊಡುವುದಿಲ್ಲ. ಇತರೆ ಭಾಷೆ ಕಲಿಯುವುದು ತಪ್ಪಲ್ಲ ಇತರ ಭಾಷೆಯೊಂದಿಗೆ ನಮ್ಮ ಭಾಷೆಗೆ ಪ್ರಥಮ ಆದ್ಯತೆ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಾಲಾಜಿ ಮೆಲೋಡಿಸ್ ಕಲಾ ತಂಡದ ಮುಖ್ಯಸ್ಥ ಸಂತೋಷ ಸಾನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಹದೇವ ನಡಗೇರ, ಸಾಹಿತಿ ವಿನಾಯಕ ಶೇಟ್, ಎಎಸ್‌ಐ ಗೀತಾ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಯುವ ಗಾಯಕಿ ಕೊಪ್ಪಳದ ಗಂಗಮ್ಮ, ಖ್ಯಾತ ನಿರೂಪಕ ಸಂದೀಪ ರೆಡ್ಡಿ, ವೀಣಾ ಓಶಿಮಠ, ಸತೀಶ ಕುರ್ಡೇಕರ, ಸುರೇಶ ಮಂಜಾಳಕರ, ಎಸ್.ಡಿ. ಮುಡೆಣ್ಣವರ, ಸುಭಾಸ ಡೋರಿ, ಸಂದೀಪ ಕೋರಿ, ಸಂತೋಷ ಕುಸ್ನೂರ, ಸಂದೀಪ ರೆಡ್ಡಿ, ವಿನಾಯಕ ಶೇಟ್ ಇದ್ದರು.