ಆಸ್ಪತ್ರೆಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಬದ್ಧ: ಸಚಿವ ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Aug 04, 2024, 01:17 AM IST
ಬೈಲಹೊಂಗಲದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ಸಚಿವ ದಿನೇಶ್‌ ಗುಂಡೂರಾ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇವಲಾಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆಯ ನೂತನ ಕಟ್ಟಡವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಯಿ ಮತ್ತು ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರದ ಅನುದಾನದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇದಕ್ಕೆ ಬೇಕಾಗುವ ಮೂಲ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಶನಿವಾರ ಪಟ್ಟಣದ ದೇವಲಾಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಾಯಿ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಗುವಿನ ಆರೋಗ್ಯ ಸದೃಢವಾಗಿರಲು ಸಾಧ್ಯ. ನೂತನವಾಗಿ ನಿರ್ಮಿಸಿರುವ ತಾಯಿ-ಮಗು ಆಸ್ಪತ್ರೆಯಲ್ಲಿ ತಿಂಗಳಿಗೆ ಕನಿಷ್ಟ 300ಕ್ಕೂ ಅಧಿಕ ಹೆರಿಗೆ ಮಾಡಿಸುವ ಗುರಿ ಇಟ್ಟುಕೊಳ್ಳಬೇಕು.ಆದ್ಯತೆ ಮೇರೆಗೆ ವೈದ್ಯ ಮತ್ತು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದ ಅವರು, ಶಾಸಕ ಮಹಾಂತೇಶ ಕೌಜಲಗಿ ಸದಾ ಅಭಿವೃದ್ದಿ ಪರ ಕನಸು ಕಂಡು ಸಚಿವರ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಅವರ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಚನ್ನಮ್ಮನ ಕಿತ್ತೂರು ತಾಲೂಕಿನಲ್ಲಿ ಆಸ್ಪತ್ರೆ ನಿರ್ಮಿಸಲು ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗವುದು ಎಂದು ಹೇಳಿದರು. ರಾಜ್ಯದಲ್ಲಿ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದ್ದರಿಂದ ಆದ್ಯತೆ ಮೇರೆಗೆ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗವುದು, ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ದುರಸ್ತಿಗಾಗಿ ₹ 4.50 ಕೋಟಿ ಅನುದಾನ ನೀಡಲಾಗುವುದು, ಜೊತೆಗೆ ಆಸ್ಪತ್ರೆಗೆ ಬೇಕಾಗುವ ಸಲಕರಣೆ ಒದಗಿಸುವ ಭರವಸೆ ನೀಡಿದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಜನತೆಗೆ 100 ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆ ಆಗಬೇಕೆನ್ನುವುದು ಬೇಡಿಕೆ ಇತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಂಡಿರುವುದು ಸಂತಸವಾಗಿದೆ. ವೈದ್ಯ, ಸಿಬ್ಬಂದಿ ನೇಮಕ ಮಾಡಲು ನಿಯಮ ಸರಳೀಕರಣಗೊಳಿಸಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯು ಖಾತ್ರಿ ಗುಣಮಟ್ಟದ ಅಡಿಯಲ್ಲಿ ಕಾಯಕಲ್ಪ ಪ್ರಶಸ್ತಿ, ಲಕ್ಷ್ಯ ಪ್ರಶಸ್ತಿ ಮತ್ತು ಎನ್‌ಕ್ಯುಯುಎಸ್ ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು, ಇದಕ್ಕೆ ವೈದ್ಯರ, ಸಿಬ್ಬಂದಿ ಸೇವಾಮನೋಭಾವನೆ ಕಾರಣವಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸಚಿವರಿಗೆ ಒತ್ತಾಯಿಸಿದರು.

ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಮುಖಂಡ ಮೃಣಾಲ್‌ ಹೆಬ್ಬಾಳಕರ, ಆಯುಕ್ತ ಡಿ.ರಣದೀಪ, ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ, ಡಾ.ಎಸ್.ವಿ. ಮುನ್ಯಾಳ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ವಿನಯ ನಾವಲಗಟ್ಟಿ, ಬಸವರಾಜ ಜನ್ಮಟ್ಟಿ, ಶಂಕರಗೌಡ ಪಾಟೀಲ, ಶಿವರುದ್ರಪ್ಪ ಹಟ್ಟಿಹೊಳಿ, ಡಾ.ಸಂಜಯ ಸಿದ್ದನ್ನವರ, ಡಾ.ನಿರ್ಮಲಾ ಮಹಾಂತಶೆಟ್ಟಿ ಅನೇಕರು ಇದ್ದರು. ಆಸ್ಪತ್ರೆ ನಿರ್ಮಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ಡಾ.ನಿರ್ಮಲಾ ಮಹಾಂತಶೆಟ್ಟಿ ಸ್ವಾಗತಿಸಿದರು, ಶಿಕ್ಷಕಿ ಮಹಾದೇವಿ ಅಂಗಡಿ ನಿರೂಪಿಸಿದರು, ಡಾ.ಅನೀಲ ಅಗ್ನಿಹೋತ್ರಿ ವಂದಿಸಿದರು. ಮಹಾದೇವಿ ಮೂಲಿಮನಿ ಸಂಗಡಿಗರಿಂದ ಪ್ರಾರ್ಥಿಸಿದರು, ಲಿಟ್ಲ್‌ ಹಾರ್ಟ್ಸ್‌ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಆಸ್ಪತ್ರೆಯ ಸಿಬ್ಬಂದಿ, ಗಣ್ಯರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ