ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಉತ್ತಮ ಶಿಕ್ಷಕರಾಗಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸಲಹೆ ನೀಡಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.ಕುವೆಂಪು, ಅ.ರಾ. ಮಿತ್ರ, ಲಂಕೇಶ, ಅ.ನ.ಕೃರಂತವರು ಶಿಕ್ಷಕರಿಗೆ ಮಾದರಿಯಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಮಕ್ಕಳಿಗೆ ಚೆನ್ನಾಗಿ ಕಲಿಸಿ ವಿದ್ಯಾವಂತರನ್ನಾಗಿ ಮಾಡಬೇಕು, ಒಟ್ಟಿನಲ್ಲಿ ಗುಣ ಮಟ್ಟದ ಶಿಕ್ಷಣ ನೀಡಿ ಎಂದು ಹೇಳಿದರು.
ಗುರುಭವನ ಕಟ್ಟಡಕ್ಕೆ ಕಾಯಕಲ್ಪ:ಪಟ್ಟಣದಲ್ಲಿರುವ ಗುರುಭವನ ಕಟ್ಟಡದ ಸ್ಥಿತಿ ಗತಿ ಪರಿಶೀಲಿಸಿ ದುರಸ್ತಿ ಮಾಡಿಸಲಿಕ್ಕೆ ಬಂದರೆ ದುರಸ್ತಿ ಮಾಡಿಸುತ್ತೇನೆ, ಇಲ್ಲದಿದ್ದರೆ ಹೊಸದಾಗಿ ಕಟ್ಟಿಸಬೇಕಾ ಎಂಬುದನ್ನು ಎಂಜಿನಿಯರ್‌ನ್ನು ಕಳಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಶೇ.70ರಷ್ಟು ಶಾಲೆಗಳ ಕಟ್ಟಡಗಳನ್ನು ದುರಸ್ತಿ ಮಾಡಿಸಿದ್ದೇನೆ. ಮುಂದಿನ ವರ್ಷ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಮಾತನಾಡಿ, ಗುರುಗಳು ಜೀವನದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ ಮಾತನಾಡಿ, ಸತ್ತ ಮೇಲೂ ಜೀವಂತ ಇರುವ ವೃತ್ತಿ ಶಿಕ್ಷಕ ವೃತ್ತಿ. ಬೋಧನೆ ಯಾವ ರೀತಿ ಮಾಡುತ್ತಾರೆ ಎಂಬುದರ ಮೇಲೆ ಶಿಕ್ಷಕರ ಘನತೆ ಹೆಚ್ಚುತ್ತದೆ ಎಂದರು.ತಾಲೂಕಿನಲ್ಲಿ ಈಗಾಗಲೇ 122 ಶಾಲೆಗಳಿಗೆ ಈ ಸ್ವತ್ತು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ಈ ಸ್ವತ್ತು ನೀಡುತ್ತೇವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಶಾಸಕರು ₹82 ಲಕ್ಷ ವೆಚ್ಚದಲ್ಲಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಕೊಡಿಸಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಆದ್ದರಿಂದ ಅವರಿಗೆ ನಾವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಭೀ ಮಾತನಾಡಿದರು. ಸ್ವಯಂ ನಿವೃತ್ತಿ ಪಡೆದ ಶಿಕ್ಷಕ ರಾಮಚಂದ್ರಪ್ಪನವರು ತಾಲೂಕಿನ ಎಲ್ಲಾ ಶಿಕ್ಷಕರಿಗೆ ಹೋಳಿಗೆ ಊಟದ ಪ್ರಾಯೋಜಕತ್ವ ವಹಿಸಿದ್ದರು. ನಿವೃತ್ತ ಶಿಕ್ಷಕರಿಗೆ, ನಿಧನರಾದ ಶಿಕ್ಷಕರ ಕುಟುಂಬಸ್ಥರಿಗೆ ಈ ಸಂದರ್ಭ ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಉದಯಶಂಕರ, ವಕೀಲ ಬಸವರಾಜ ಸಂಗಪ್ಪನವರ್, ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್ ಸಾಹೇಬ್, ಲಾಟಿದಾದಾಪೀರ, ಜಾಕೀರ ಹುಸೇನ್, ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನತ್ತೆಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮೂಖಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ನಾಗರಾಜ, ಮುಖಂಡ ದೇವೇಂದ್ರಗೌಡ ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಬಂದೋಳ ಸಿದ್ದೇಶ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ ನಿರೂಪಿಸಿದರು.