ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಪತ್ರಕರ್ತರಿಗೆ ನಿವೇಶನ ಒದಗಿಸುವ ಕುರಿತು ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಜತೆ ಚರ್ಚಿಸುವುದಾಗಿ ಹೇಳಿದರು.
ಪ್ರೆಸ್ ಫ್ರೀಡಂನಲ್ಲಿ 180 ದೇಶಗಳಲ್ಲಿ ನಮ್ಮ ದೇಶ 161ನೇ ಸ್ಥಾನದಲ್ಲಿದೆ. ಪತ್ರಿಕೋದ್ಯಮ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳು ಕಲುಷಿತಗೊಂಡಿವೆ. ಯಾರು ಯಾರಿಗೂ ಹೇಳುವ ಸ್ಥಿತಿಯಿಲ್ಲ. ಆದರೆ, ಸಮಾಜಕ್ಕೆ ಏನಾದರೂ ಸಂದೇಶ ನೀಡಲು ಪತ್ರಕರ್ತರು ಬೇಕಾಗುತ್ತದೆ. ದೇಶದಲ್ಲಿ ಬದಲಾವಣೆಯಾಗಲು ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಎಲ್ಲ ಪತ್ರಕರ್ತರು ಪ್ರಾಮಾಣಿಕ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ ಮಾತನಾಡಿ, ಪತ್ರಿಕಾ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವುದನ್ನು ಕಂಡಲ್ಲಿ ಸಂತಸವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕೋರ್ಸ್ ಸ್ಥಗಿತವಾಗುವ ಹಂತಕ್ಕೆ ಬಂದಿರುವುದು ಆತಂಕಕಾರಿ ಹಾಗೂ ಚಿಂತನೆ ಮಾಡಬೇಕಾದ ವಿಷಯವಾಗಿದೆ. ಮಾಧ್ಯಮ ಅಕಾಡೆಮಿಯಿಂದಲೂ ಈ ಬಗ್ಗೆ ಚರ್ಚಿಸಲಾಗುವುದು.
ಕೆಲವೇ ಜನರು ಮಾಡುವ ತಪ್ಪುಗಳಿಂದ ಇಡೀ ಕ್ಷೇತ್ರದ ಮಾನ ಹಾಳಾಗುತ್ತಿದೆ. ನಕಲಿ ಪತ್ರಕರ್ತರನ್ನು ಹೊರಹಾಕುವ ಕೆಲಸ ನಾವೇ ಮಾಡಬೇಕು. ಪತ್ರಕರ್ತರು ಒಗ್ಗಟ್ಟು ತೋರಿಸಬೇಕಿದೆ. ಈ ಕ್ಷೇತ್ರವನ್ನು ಸ್ವಚ್ಚಗೊಳಿಸುವ ಕೆಲಸವನ್ನು ನಾವೇ ಮಾಡಬೇಕಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಪತ್ರಕೋದ್ಯಮ ಇನ್ನಷ್ಟು ಬೆಳೆಸಲು ಸಾಧ್ಯವಾಗುತ್ತಿದೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಮಾತನಾಡಿ, ಸಂಘದ ಸದಸ್ಯತ್ವದಿಂದ ಸಂಗ್ರಹಿಸಲಾದ ₹65 ಲಕ್ಷ ಹಣವನ್ನು ಪತ್ರಕರ್ತರಿಗಾಗಿ ಕ್ಷೇಮ ನಿಧಿ ಇರಿಸಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಪಾಸ್ ನೀಡುವ ಕುರಿತು ರೂಪುರೇಷೆ ಸಿದ್ಧವಾಗಿದೆ. ಆರೋಗ್ಯ ಕಾರ್ಡ್ ಕೂಡ ವಿತರಿಸುವ ಚಿಂತನೆ ಸರ್ಕಾರ ನಡೆಸಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲೆಂದ್ರ ಕುಂದರಗಿ ಸೇರಿದಂತೆ ಹಲವರಿದ್ದರು.