ಗದಗ: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಪಾತ್ರ ಅತ್ಯಂತ ಮಹತ್ವವಾಗಿದ್ದು, ಶುಶ್ರೂಷಕರು ವೈದ್ಯರಷ್ಟೆ ಪ್ರಾಮುಖ್ಯತೆ ಹೊಂದಿದ್ದು, ಆಧುನಿಕ ನರ್ಸಿಂಗ್ ವಿಜ್ಞಾನ ಬಹಳಷ್ಟು ತಂತ್ರಜ್ಞಾನ ಹೊಂದಿದ್ದು ತಾವು ಉತ್ತಮ ಕಲಿಕೆಯೊಂದಿಗೆ ರೋಗಿಗಳ ಹಾಗೂ ಸಮಾಜ ಸೇವೆಗೆ ಬದ್ಧರಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ನಗರದ ಡಾ. ಎಸ್.ವಿ. ತೋಟಗಂಟಿಮಠ ಕಾಲೇಜ ಆಫ್ ನರ್ಸಿಂಗ್, ಮದರ್ ಥೆರೇಸಾ ನರ್ಸಿಂಗ್ ಕಾಲೇಜ ಹಾಗೂ ಗಾಂಧೀಜಿ ಪ್ಯಾರಾ ಮೆಡಿಕಲ್ ಕಾಲೇಜಿನ 2024-25ನೇ ಸಾಲಿನ ನೂತನ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ, ಪ್ರತಿಜ್ಞಾವಿಧಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಸಿನೇಟ್ ಸದಸ್ಯ ಡಾ. ವೀರೇಶ ಹಂಚಿನಾಳ ಮಾತನಾಡಿ, ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಶದಲ್ಲಿ ಹಾಗೂ ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಈ ಕ್ಷೇತ್ರಗಳಲ್ಲಿ ಉನ್ನತ ಪದವಿ ಹಾಗೂ ಸ್ಥಾನಮಾನ ಪಡೆಯಬೇಕಾದರೆ ತಾವು ಬೋಧಿಸಲ್ಪಡುವ ಪಠ್ಯದ ಜತೆಗೆ ಇಂದಿನ ವೈದ್ಯಕೀಯ ಕ್ಷೇತ್ರಗಳಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಸುದೀರ್ಘವಾಗಿ ಅಭ್ಯಸಿಸುವ ಮೂಲಕ ಪ್ರಮುಖ ಚಿಕಿತ್ಸಾ ಕ್ರಮ ತಮ್ಮ ವಿಶಿಷ್ಠ ಕೌಶಲ್ಯ ಮೂಲಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕೆಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಂದ್ರ ಬಸರಿಗಿಡದ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕರಿಗೆ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ಬೇಡಿಕೆ ಇದ್ದು ಹೆಚ್ಚಿನ ವ್ಯಾಸಂಗ ಮಾಡುವ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಹೊಂದುವ ಮೂಲಕ ಕಲಿತ ಸಂಸ್ಥೆಗೆ ಹಾಗೂ ಪಾಲಕರಿಗೆ ಶ್ರೇಯಸ್ಸನ್ನು ನೀಡಬೇಕೆಂದು ತಿಳಿಸಿದರು.ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಮಾತನಾಡಿದರು. ಅಧ್ಯಕ್ಷತೆ ಡಾ. ಎಸ್.ವಿ.ಟಿ ಸಂಸ್ಥೆಯ ಚೇರಮನ್ ವನಜಾಕ್ಷಿ ತೋಟಗಂಟಿಮಠ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಸಂತೋಷ ತೋಟಗಂಟಿಮಠ, ಕಾರ್ಯದರ್ಶಿ ಆನಂದ ತೋಟಗಂಟಿಮಠ, ಪ್ರಾ.ಶಿವಕುಮಾರ ಕಾತರಕಿ, ಉಪನ್ಯಾಸಕ ವಿನಯ ಕುಪ್ಪಸ್ತ, ಅಂಬಿಕಾ ಬಳಗಾರ, ತೇಜಸ್ವಿನಿ, ಪ್ರೇಮಾ ಲಮಾಣಿ, ಸಂತೋಷ ಹುಣಸಿಮರದ, ರಾಧಾ ಬೂಧಿಹಾಳ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ದೀಪಿಕಾ ಕಾಂಬಳೆ ಸ್ವಾಗತಿಸಿದರು. ಜಾಯ್‌ಸನ್ ಬಂಡಿ ನಿರೂಪಿಸಿದರು. ಹಿಮಾಮ್‌ಬಿ ರಾಯಚೂರ ವಂದಿಸಿದರು.