ಚಿಕ್ಕಮಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ಸಮುದಾಯದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ಸಮುದಾಯದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದರು. ಏ. ೧೩ರಂದು ನಡೆಯಲಿರುವ ಎಕೆಬಿಎಂಎಸ್ ಚುನಾವಣೆ ಸಲುವಾಗಿ ನಗರಕ್ಕೆ ಆಗಮಿಸಿದಾಗ ಎಕೆಬಿಎಂಎಸ್ ಸದಸ್ಯರನ್ನು ಭೇಟಿ ಮಾಡಿ, ತಮ್ಮನ್ನು ಬೆಂಬಲಿಸುವಂತೆ ಕೋರಿ, ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮನ್ನು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಎಕೆಬಿಎಂಎಸ್ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಭಾನುಪ್ರಕಾಶ್ ಶರ್ಮ ಮಹಾಸಭಾದಲ್ಲಿ ಕಳೆದ ೩೦ ವರ್ಷಗಳಿಂದ ಸದಸ್ಯರಾಗಿ ವಿವಿಧ ಹಂತಗಳ ಪದಾಧಿಕಾರಿಯಾಗಿ 3 ಬಾರಿ ಉಪಾಧ್ಯಕ್ಷರಾಗಿ, ವಿಎಚ್ ಪಿ ಜತೆ ಗುರುತಿಸಿಕೊಂಡು ಸನಾತನ ಧರ್ಮದ ಉಳಿವಿಗೆ ಶ್ರಮಿಸುತ್ತಿದ್ದಾರೆ. ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಲು ವಿಶೇಷ ಕಾರ್ಯ ಕ್ರಮ ಹಮ್ಮಿಕೊಂಡ ಅವರು ೧೪ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಧರ್ಮ ಹಾಗೂ ಗೋ ಸಂರಕ್ಷಣೆ ವಿಚಾರದಲ್ಲಿ ಅನೇಕ ವಿಚಾರ ಗೋಷ್ಠಿ ನಡೆಸಿರುವ ಅವರು ಸ್ವತಃ ಗೋಶಾಲೆ ನಡೆಸುತ್ತಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತವನ್ನು ಮನದಟ್ಟಾಗುವಂತೆ ಸಮಾಜದ ಮಹಿಳೆಯರು, ಮಕ್ಕಳು ಮತ್ತು ಯುವ ಜನಾಂಗಕ್ಕೆ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಕನ್ನಡ ಭಾಷೆ ಮತ್ತು ಕಾವೇರಿ ಉಳಿಸಿ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿ ಮುಂಚೂಣಿಯಲ್ಲಿದ್ದಾರೆ. ಅಮೆರಿಕಾದ ನ್ಯೂಜೆರ್ಸಿ, ವಾಷಿಂಗ್ಟನ್‌ನಲ್ಲಿ ಅತಿರುದ್ರ ಹಾಗೂ ಮಹಾರುದ್ರ ಯಾಗಗಳ ಯಶಸ್ವಿ ಆಯೋಜನೆ, ೧೧ ಬಾರಿ ಕೈಲಾಸ ಮಾನಸ ಸರೋವರ ಯಾತ್ರೆ, ವಿದೇಶಗಳಲ್ಲಿ ಬ್ರಾಹ್ಮಣ ಸಂಘಗಳ ಸ್ಥಾಪನೆ, ೨೦೧೭ರಲ್ಲಿ ಸರಿ ಸುಮಾರು ೧೫ ಲಕ್ಷ ಜನ ಪಾಲ್ಗೊಂಡಿದ್ದ ಕಾವೇರಿ ಪುಷ್ಕರ ಯೋಜನೆ ಅಧ್ಯಕ್ಷತೆ ವಹಿಸಿದ್ದು, ದಕ್ಷಿಣ ಭಾರತ ಪುರೋಹಿತರ ಸಂಘದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಪುರೋಹಿತ ಪರಿಷತ್‌ನ ಪ್ರಸ್ತುತ ಪ್ರಧಾನ ಕಾರ್ಯದರ್ಶಿ-ಹೀಗೆ ಅವರ ಸಾಧನೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥವರ ಆಯ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ನಿಜಕ್ಕೂ ಶ್ರೇಯಸ್ಸು ತರುತ್ತದೆ ಎಂದರು. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿ, ಸನಾತನ ಧರ್ಮದ ಉಳಿವಿನ ದೃಷ್ಟಿ ಯಿಂದ ವೇದಮೂರ್ತಿ ಭಾನುಪ್ರಕಾಶ ಶರ್ಮ ಸಮಾಜಕ್ಕೆ ಅಗತ್ಯವಾಗಿದ್ದು, ಎಕೆಬಿಎಂಎಸ್‌ನ ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಚಿಕ್ಕಮಗಳೂರು ಜಿಲ್ಲೆ ಪ್ರತಿನಿಧಿಯಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಅವಿರೋಧ ಆಯ್ಕೆಯಾದ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲ ಮಾತನಾಡಿದರು. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಹಿರಿಯ ಸದಸ್ಯ ಸ.ಗಿರಿಜಾಶಂಕರ ಮಾತನಾಡಿದರು. ಮಹಾಸಭಾದ ಹಿರಿಯ ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ ಇದ್ದರು.೭ಸಿಕೆಎಂ ಫೋಟೋ:
ಇತ್ತೀಚೆಗೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಸದಸ್ಯರನ್ನು ಭೇಟಿ ಮಾಡಿದ ಎಕೆಬಿಎಂಎಸ್ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡಾ.ಭಾನುಪ್ರಕಾಶ್ ಶರ್ಮ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.